ನವದೆಹಲಿ: ವಯನಾಡಿನಿಂದ ಮೊದಲಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಗಾಂಧಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಪ್ರಿಯಾಂಕಾ ಗಾಂಧಿಯವರು ವಯನಾಡಿನಲ್ಲಿ ಆಗುತ್ತಿರುವ ಪ್ರಕೃತಿ ವಿಕೋಪಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಸುಮಾರು 10 ನಿಮಿಷಗಳ ಕಾಲದ ಭೇಟಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಕೃತಿ ವಿಕೋಪ ಎದುರಿಸುತ್ತಿರುವ ವಯನಾಡಿಗೆ 2,000 ಕೋಟಿಗೂ ಹೆಚ್ಚು ವಿಶೇಷ ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕಾ ಅವರ ಭೇಟಿ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಬೆಳವಣಿಗೆ ಎಂದೇ ಹೇಳಬಹುದು. ಯಾಕೆಂದರೆ ಗಾಂಧಿ ಕುಟುಂಬದ ಯಾರೊಬ್ಬರೂ ಇದುವರೆಗೆ ಯಾವುದೇ ಕೇಂದ್ರ ಸರ್ಕಾರದ ಸಚಿವರೊಂದಿಗೆ ಅದರಲ್ಲೂ ವಿಶೇಷವಾಗಿ ಗೃಹ ಸಚಿವರೊಂದಿಗೆ ಅವರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿರಲಿಲ್ಲ.
ಮಾಧ್ಯಮಗಳಿಗೆ ಪ್ರತಿಕ್ರಿಯೆ :
ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಪ್ರಿಯಾಂಕಾ ಗಾಂಧಿ, ಕೇಂದ್ರ ಗೃಹ ಸಚಿವರೊಂದಿಗೆ ಇಂದು ಒಂದು ಉತ್ತಮ ಭೇಟಿಯಾಗಿದೆ. ವಯನಾಡಿನಲ್ಲಿ ಸಂತ್ರಸ್ತರು ಸಂಪೂರ್ಣವಾಗಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅಲ್ಲಿನ ಜನರಿಗೆ ಭರವಸೆ ಕೊಟ್ಟು ನಾಲ್ಕು ತಿಂಗಳು ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಗೃಹ ಸಚಿವರಿಗೆ ತಿಳಿಸಿದ್ದೇನೆ.
ಅವರು ನಮ್ಮ ಮಾತನ್ನು ಆಲಿಸಿದ್ದಾರೆ. ರಾಜಕೀಯ ಬದಿಗಿಟ್ಟು, ಸಂತ್ರಸ್ತರ ನೋವು ಮತ್ತು ಸಂಕಟಗಳತ್ತ ಗಮನಹರಿಸುವಂತೆ ಎಲ್ಲ ಕೇರಳದ ಸಂಸದರ ಪರವಾಗಿ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಗೃಹಸಚಿವರು ಕೂಡ ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದೆ ಏನು ಮಾಡಬಹುದು ಎಂಬ ವಿವರಗಳನ್ನು ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.