ಬೆಂಗಳೂರು : ಬೆಂಗಳೂರಿಗೆ ಬೇರೆ ರಾಜ್ಯದಿಂದ ನಾಯಿ ಮಾಂಸ ಸಾಗಾಟ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಠಾಣೆಯಲ್ಲೇ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಾಟನ್ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿ ಅವರನ್ನು ರಾತ್ರಿ 12 ಗಂಟೆ ವೇಳೆಗೆ ಬಂಧಿಸಿದ್ದರು. ಠಾಣೆಯಲ್ಲಿ ಮಲಗಿದ್ದ ಪುನೀತ್ ಮುಂಜಾನೆ 4.45ರ ವೇಳೆಗೆ ಅಸ್ವಸ್ಥಗೊಂಡಿದ್ದು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ರಾತ್ರಿ ಜೈಪುರದಿಂದ ಸುಮಾರು 50ಕ್ಕೂ ಹೆಚ್ಚು ಬಾಕ್ಸ್‌ಗಳಲ್ಲಿ 4,500 ಕೆಜಿ ಕುರಿ ಮಾಂಸ ಸಾಗಿಸಲಾಗಿದ್ದು, ಇದರಲ್ಲಿ ನಾಯಿ ಮಾಂಸವನ್ನು ಕೂಡಾ ಸೇರ್ಪಡೆ ಮಾಡಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ.
ರೈಲಿನಿಂದ ಈ ಬಾಕ್ಸ್‌ಗಳನ್ನು ಹೊರಗೆ ತರುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಮತ್ತು ಇತರರು ರೈಲು ನಿಲ್ದಾಣದಲ್ಲೇ ಬಾಕ್ಸ್‌ಗಳ ರವಾನೆಗೆ ಅಡ್ಡಿಪಡಿಸಿದ್ದರು. ಈ ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಇದೆ, ಸ್ವಚ್ಛವಾಗಿಲ್ಲ ಎಂದು ದೂರಿದ್ದರು.
ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುನೀತ್ ಕೆರೆಹಳ್ಳಿ ಬಂಧಿಸಲಾಗಿದ್ದು, ಸದ್ಯ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಮಾಂಸವನ್ನು ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ಗುಣಮಟ್ಟ ಹಾಗೂ ಮಾಂಸ ದೃಢೀಕರಣಕ್ಕಾಗಿ ಪರೀಕ್ಷೆಗೆ ಕಳುಹಿಸಿದ್ದಾರೆ.