ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕು ವ್ಯಾಪ್ತಿಯ ಬಸ್ಸಾಪುರ (ಇಜೆ) ಗ್ರಾಮದಲ್ಲಿರುವ ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ದೇವೇಂದ್ರಪ್ಪ ಸ್ವಾಮಿ (58) ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಮಠದ ಭೋಜನಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ದೇವೇಂದ್ರಪ್ಪ ಸ್ವಾಮಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೂಲತಃ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾದ ಅವರು, ಕಳೆದ 20 ವರ್ಷಗಳಿಂದ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ವೈರಾಗ್ಯದಿಂದ ಮಠವನ್ನು ನಿರ್ಮಿಸಿ, ಶಾಲಾ ಅವಧಿ ಬಳಿಕ ಧಾರ್ಮಿಕ ಪ್ರವಚನಗಳನ್ನು ನೀಡುತ್ತಿದ್ದರು.
ಕುಟುಂಬದಿಂದ ದೂರವಿದ್ದುಕೊಂಡಿದ್ದ ದೇವೇಂದ್ರಪ್ಪ ಸ್ವಾಮಿ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

