ಮಂಗಳೂರು, ಮೇ 12- ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ (34) ಇಂದು ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಿನ್ನೆಯಷ್ಟೇ ಕಾಂತಾರ-2 ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ರಾಕೇಶ್, ರಾತ್ರಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.
ಸ್ನೇಹಿತರ ಜೊತೆ ಇದ್ದಾಗ ಹೃದಯಘಾತ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಮುಂಜಾನೆ 3.30ರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ರಾತ್ರಿ ಅವರು ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದಲ್ಲಿ ಸ್ನೇಹಿತನ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು. ಆ ವೇಳೆ ಸುಸ್ತು ಆಗುತ್ತಿದೆ ಎಂದು ಸ್ನೇಹಿತರ ಬಳಿ ಹೇಳಿದ ಕೆಲವೇ ನಿಮಿಷಗಳಲ್ಲಿ ಅಶ್ವಸ್ಥರಾಗಿ ಕುಸಿದಿದ್ದಾರೆ.
ತಕ್ಷಣ ರಾಕೇಶ್ ಅವರನ್ನು ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ರಾಕೇಶ್ ಅವರು ಕೊನೆಯದಾಗಿ ದಸ್ತಕ್ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಅಪಘಾತದಲ್ಲಿ ಗಾಯಗೊಂಡಿದ್ದರು.
ರಾಕೇಶ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ ರಕ್ಷಿತಾ ಪ್ರೇಮ್ ಇನ್‌ಸ್ಟಾದಲ್ಲಿ ವಿಶೇಷ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ. ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಸೀಸನ್ -3 ರ ಟ್ರ್ಯಾಂಡ್ ಫಿನಾಲೆಯಲ್ಲಿ ಎನ್ನರ್ ಆಗಿದ್ದ ಉಡುಪಿ ನಿವಾಸಿ ರಾಕೇಶ್ ಅವರು ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಯ ಪುತ್ರ.
ರಾಕೇಶ್ ಅವರು ಶಿಕ್ಷಣವನ್ನು ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದಿದ್ದರು. ಅಷ್ಟೇ ಅಲ್ಲದೆ ಪೈಲ್ವಾನ್, ಇದು ಎಂತಾ ಲೋಕವಯ್ಯ ಕನ್ನಡ ಸಿನಿಮಾ, ಪೆಟ್ಟಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳು ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಮನ ಗಳಿಸಿದ್ದರು.

