ನವದೆಹಲಿ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಚೆನ್ನೈ ನಗರದ ಪ್ರಮುಖ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ತುರ್ತು ಪರಿಸ್ಥಿತಿ ಅಲ್ಲ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
67 ವರ್ಷದ ಶಕ್ತಿಕಾಂತ ದಾಸ್ ಅವರನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆರ್‌ಬಿಐ ಗವರ್ನರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ ಮೂಲಗಳು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿವೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆಸಿಡಿಟಿಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಆರ್‌ಬಿಐ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ 2018ರ ಡಿಸೆಂಬರ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ, ಶಕ್ತಿಕಾಂತ ದಾಸ್ ಅವರನ್ನು 3 ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್ ಆಗಿ ನೇಮಿಸಲಾಯಿತು. 2021ರಲ್ಲಿ ಅವರ ಅಧಿಕಾರಾವಧಿಯನ್ನು ಮೂರು ವರ್ಗಳವರೆಗೆ ವಿಸ್ತರಿಸಲಾಯಿತು. ಮುಂಬರುವ ಡಿಸೆಂಬರ್ 10 ರಂದು ಶಕ್ತಿಕಾಂತ ದಾಸ್ ಅಧಿಕಾರಾವಧಿ ಕೊನೆಯಾಗಲಿದೆ.

