ಬೆಂಗಳೂರು: ಸೂಪರ್ ಸಂಡೇ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧ ಸಿಎಸ್‌ಕೆ (RCB vs CSK) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಶನಿವಾರ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ತಂಡದ ನಾಯಕ ರಜತ್ ಪಾಟಿದಾರ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಂದ್ಯಕ್ಕೂ ಮುನ್ನ ದೇವರ ಆಶೀರ್ವಾದ ಪಡೆಯಲು ಆಟಗಾರರು ಮೊರೆಹೋದರು.
19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ಭರ್ಜರಿ ಆರಂಭ ಪಡೆದಿರುವ ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಕಳೆದ ವರ್ಷವೂ ಪಾಟಿದಾರ್ ಹಾಗೂ ಜಿತೇಶ್ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ್ದ ಹಿನ್ನೆಲೆ, ಈ ಬಾರಿ ಕೂಡ ಅದೇ ಶುಭ ಫಲಿತಾಂಶದ ನಿರೀಕ್ಷೆಯಿದೆ.
ಇನ್ನೂ 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಫೈನಲ್ ತಲುಪಿದರೂ ಪ್ರಶಸ್ತಿ ತಪ್ಪಿಸಿಕೊಂಡಿದ್ದ ಆರ್‌ಸಿಬಿ, 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸಿತ್ತು. ಇದೀಗ ಮತ್ತೆ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಜಯದ ಸರಣಿಯನ್ನು ಮುಂದುವರಿಸಲು ತಂಡ ಸಜ್ಜಾಗಿದೆ.

