Myanmar Earthquake : ಮ್ಯಾನ್ಮಾರ್ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2000 ಗಡಿದಾಟಿದೆ. ಭೀಕರ ಭೂಕಂಪಕ್ಕೆ ಮ್ಯಾನ್ಮಾರ್ ಸರ್ಕಾರ ಒಂದು ವಾರ ರಾಷ್ಟ್ರೀಯ ಶೋಕಾಚರಣೆಗೆ ಕರೆ ನೀಡಿದೆ.
ಶುಕ್ರವಾರದಂದು (ಮಾ.28) ಸಂಭವಿಸಿದ 7.7 ತೀವ್ರತೆಯ ಭೂಕಂಪಕ್ಕೆ ಊಹೆಗೂ ಮೀರಿದ ಜನರು ದುರಂತ ಅಂತ್ಯ ಕಂಡಿದ್ದಾರೆ. ಈ ಹಿನ್ನೆಲೆ ಏಪ್ರಿಲ್ 6ರವರೆಗೆ ರಾಷ್ಟ್ರೀಯ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಲಿವೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದನ್ನು ವಿವರಿಸುವುದು ಕಷ್ಟಸಾಧ್ಯ. ಪ್ರತಿನಿಮಿಷವು ನರಕ ಎಂಬಂತೆ ಭಾಸವಾಗುತ್ತಿದೆ. ಇಲ್ಲಿನ ಸ್ಥಿತಿ-ಗತಿಯನ್ನು ವ್ಯಕ್ತಪಡಿಸುವುದು ತೀರ ನೋವಿನ ಸಂಗತಿ” ಎಂದು ಮಂಡಲೆಯ ಸಜ್ಜಾ ಉತ್ತರ ಮಸೀದಿಯ ಮುಖ್ಯ ಆಡಳಿತಾಧಿಕಾರಿ ಆಂಗ್ ಮೈಂಟ್ ಹುಸೇನ್ ಹೇಳಿದ್ದಾರೆ.
ಇಲ್ಲಿಯವರೆಗೂ ಲಭಿಸಿರುವ ಮಾಹಿತಿ ಪ್ರಕಾರ, ಸಾವಿನ ಸಂಖ್ಯೆ 2,056ಕ್ಕೆ ತಲುಪಿದ್ದು, 3,900ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು 270 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಾರ್ಥನೆ ಮಾಡುತ್ತಿದ್ದಾಗಲೇ ಭೂಕಂಪ – 700 ಸಾವು,
ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗಲೇ ಭೂಕಂಪ ಸಂಭವಿಸಿದ್ದರಿಂದ ಸುಮಾರು 700ಕ್ಕೂ ಹೆಚ್ಚು ಬಂಧುಗಳು ಮೃತಪಟ್ಟಿದ್ದಾರೆ ಎಂದು ಮ್ಯಾನ್ಮಾರ್ ಮುಸ್ಲಿಂ ಸಂಘಟನೆ (Myanmar Muslim Organisation) ತಿಳಿಸಿದೆ.
ಪವಿತ್ರ ರಂಜಾನ್ ಸಮಯದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಈ ಸಂದರ್ಭದಲ್ಲೀ ಭೂಕಂಪ ಸಂಭವಿಸಿದ್ದರಿಂದ ಸುಮಾರು 60 ಮಸೀದಿಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮಾರ್ ಮುಸ್ಲಿಂ ನೆಟ್‌ವರ್ಕ್‌ನ ಸ್ಟೀರಿಂಗ್ ಕಮಿಟಿಯ ಸದಸ್ಯರಾದ ತುನ್ ಕಿ ಹೇಳಿದ್ದಾರೆ.

