ಬೆಂಗಳೂರು: ಸಿನಿಮಾ ಸ್ಟೈಲ್‌ನಲ್ಲಿ ಯುವಕನನ್ನು ಅಡ್ಡಗಟ್ಟಿ ಹಾಡಹಗಲೇ ಭಾರೀ ಮೊತ್ತದ ದರೋಡೆ ನಡೆಸಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ನಡೆದಿದೆ.
ಯುವಕನ ಬೈಕ್ ಸಹಿತ 31 ಲಕ್ಷ 38 ಸಾವಿರ ರೂ. ನಗದು ದರೋಡೆ ಮಾಡಲಾಗಿದೆ. ಆರೋಪಿಗಳು ಲಾಂಗ್‌ನಿಂದ ಹಲ್ಲೆ ನಡೆಸಿ ಕೈಚಳಕ ತೋರಿಸಿದ್ದು, ದರೋಡೆಗೆ ಒಳಗಾದ ಯುವಕ ಬೆಚ್ಚಿಬೀಳುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಘಟನೆ ನಿನ್ನೆ ಸಂಜೆ ಸುಮಾರು 4.20ರ ವೇಳೆಗೆ ನಡೆದಿದೆ.
ಕೈಲಾಸ್ ಎಂಬ ಯುವಕ ದರೋಡೆಗೆ ಒಳಗಾಗಿದ್ದು, ಆತ ರಾಕೇಶ್ ಎಂಬುವವರ ಬಳಿ ಕ್ಯಾಷ್ ಪಿಕಪ್ ಕೆಲಸ ಮಾಡಿಕೊಂಡಿದ್ದ. ಕೈಲಾಸ್ ಜೂಪಿಟರ್ ಬೈಕ್‌ನಲ್ಲಿ ಉಡಾನ್ ಕಂಪನಿಯ ವಿವಿಧ ಬ್ರಾಂಚ್‌ಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ. ನಿನ್ನೆ ಸಹ ಉಡಾನ್ ಬ್ರಾಂಚ್‌ಗಳಿಂದ ಹಣ ಕಲೆಕ್ಟ್ ಮಾಡಿ ಬೈಕ್‌ನ ಡಿಕ್ಕಿಯಲ್ಲಿ ಇಟ್ಟುಕೊಂಡು ಸಕಲವಾರದಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಬರುತ್ತಿದ್ದ ವೇಳೆ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಆರೋಪಿಗಳು ದಾಳಿ ನಡೆಸಿ ನಗದು ಹಾಗೂ ಬೈಕ್ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

