ಹಾಸನ, ಜನವರಿ 04: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರಿಗೆ ನ್ಯಾಯಾಲಯದಿಂದ ಭಾರಿ ಹಿನ್ನಡೆ ಎದುರಾಗಿದೆ. ಹಾಸನದ ವಿದ್ಯಾನಗರದಲ್ಲಿರುವ ತಮ್ಮ ನಿವಾಸದ ಪಕ್ಕದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೋರ್ಟ್ ಆದೇಶದ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿದೆ.
ಪುಷ್ಪಾ ಅವರು ಸುಮಾರು 1,500 ಚದರ ಅಡಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಜಾಗದ ಮಾಲೀಕ ದೇವರಾಜು ಆರೋಪಿಸಿದ್ದಾರೆ. ಲಕ್ಷ್ಮಮ್ಮ ಎಂಬವರ ಸ್ವತ್ತಾಗಿರುವ ಈ ಜಾಗದಲ್ಲಿ ಪುಷ್ಪಾ ಅವರು ಅಕ್ರಮವಾಗಿ ಗೋಡೆ ನಿರ್ಮಿಸಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ನ್ಯಾಯಾಲಯದ ಅನುಮತಿಯೊಂದಿಗೆ ಜೆಸಿಬಿ ಬಳಸಿ ಕಾಂಪೌಂಡ್ ನೆಲಸಮಗೊಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯವು ಜಾಗದ ಮಾಲೀಕ ದೇವರಾಜು ಪರವಾಗಿ ಆದೇಶ ನೀಡಿದೆ. ಹಲವು ಬಾರಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದರೂ ಯಶ್ ಅವರ ತಾಯಿ ಪುಷ್ಪಾ ಅವರು ನ್ಯಾಯಾಲಯಕ್ಕೆ ಹಾಜರಾಗದೇ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ, ಕೋರ್ಟ್ ದೇವರಾಜು ಪರ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ. ಜಿಪಿಎ ಹೋಲ್ಡರ್ ಮೂಲಕ ಅಕ್ರಮ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಪ್ರಕರಣದ ಬಗ್ಗೆ ಮಾತನಾಡಿದ ದೇವರಾಜು, “ಈ ಜಾಗ ಲಕ್ಷ್ಮಮ್ಮ ಎಂಬುವವರಿಗೆ ಸೇರಿದ್ದು, ಅವರಿಗೆ ಈಗ 94 ವರ್ಷ. ಅವರು ಮೈಸೂರಿನಲ್ಲಿ ವಾಸವಾಗಿದ್ದಾರೆ. 2020ರಲ್ಲಿ ಮೈಸೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನನಗೆ ಜಿಪಿಎ ಹೋಲ್ಡರ್ ಅಧಿಕಾರ ನೀಡಿದ್ದರು. ಆ ನಂತರ ನಾನು ಈ ಪ್ರಾಪರ್ಟಿಯನ್ನು ನೋಡಿಕೊಳ್ಳುತ್ತಿದ್ದೆ. ಈ ನಡುವೆ ಪುಷ್ಪಾ ಅವರು ಕಾಂಪೌಂಡ್ ಹಾಕಲು ಆರಂಭಿಸಿದ್ದರು. ವಿಷಯ ಗೊತ್ತಾದ ಮೇಲೆ ಸ್ಥಳಕ್ಕೆ ಹೋಗಿ ಕಾರ್ಮಿಕರನ್ನು ಪ್ರಶ್ನಿಸಿದೆ. ಅವರು ಓನರ್ ಹೇಳಿದ್ದಾರೆ ಎಂದು ಉತ್ತರಿಸಿದರು. ಬಳಿಕ ಯಶ್ ಅವರ ತಂದೆ ಸ್ಥಳಕ್ಕೆ ಬಂದರು. ಜಾಗ ನನ್ನದು ಎಂದು ಹೇಳಿದಾಗ, ಅದಕ್ಕೆ ಪುರಾವೆ ಏನು ಎಂದು ಪ್ರಶ್ನಿಸಿದರು. ನಂತರ ನಾನು ಪೊಲೀಸರಿಗೆ ದೂರು ನೀಡಿದೆ. ಪ್ರಯೋಜನವಾಗದ ಕಾರಣ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು” ಎಂದು ವಿವರಿಸಿದ್ದಾರೆ.
ಇನ್ನು, ಜಾಗದ ಮಾಲೀಕರ ಆರೋಪಗಳನ್ನು ಯಶ್ ಅವರ ತಾಯಿ ಪುಷ್ಪಾ ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಪ್ರಕರಣ ಇದೀಗ ನ್ಯಾಯಾಲಯದ ಆದೇಶದೊಂದಿಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹಾಸನ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

