ಬೆಂಗಳೂರು, ಫೆ. 10: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಸೋಮವಾರ (ಫೆ.10) ವಜಾಗೊಳಿಸಿದೆ. ಈ ಮೂಲಕ ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಶಾಸಕರಿಗೆ ಬಂಧನದ ಭೀತಿ ಮತ್ತಷ್ಟು ತೀವ್ರಗೊಂಡಿದೆ.
ಜಾಮೀನು ಅರ್ಜಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಕ್ಷಣದಲ್ಲಾದರೂ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ. ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ವಿರುದ್ಧ ಈಗಾಗಲೇ ‘ಲುಕ್‌ಔಟ್ ನೋಟಿಸ್’ ಜಾರಿಯಲ್ಲಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಹೊರರಾಜ್ಯಗಳ ಪೊಲೀಸ್ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಶಾಸಕರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಿಂದ ಶಾಸಕರ ಬಂಧನ ಯಾವಾಗ ಬೇಕಾದರೂ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಜುಲೈ 15ರಂದು ಬೆಂಗಳೂರಿನ ಹಲಸೂರು ಪ್ರದೇಶದಲ್ಲಿ ನಡೆದ ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ರೌಡಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕ ಬೈರತಿ ಬಸವರಾಜ್‌ಗೆ ನೇರ ಸಂಪರ್ಕವಿದೆ ಎಂಬ ಆರೋಪಗಳು ಕೇಳಿಬಂದಿವೆ. ಬಿಕ್ಲು ಶಿವನ ಹತ್ಯೆಗೆ ಮುನ್ನ ಇಬ್ಬರು ಹತ್ತಾರು ಬಾರಿ ಭೇಟಿಯಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಶಾಸಕರ ವಿರುದ್ಧ ಕೆಲವು ಪ್ರಮುಖ ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

