ಮಂಗಳೂರು, ಮಾ.27: ಕರಾವಳಿಯಲ್ಲಿ ಬೆಳ್ಳಂಬೆಳಗ್ಗೆ ರಕ್ತಪಾತ ನಡೆದಿದ್ದು, ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲೆ ರೌಡಿಶೀಟರ್‌ನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಮೃತನನ್ನು ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿ ಆರಿಫ್ @ ಟಾಬ್ಲೆಟ್ ಆರಿಫ್ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಿಂಬದಿಯಿಂದ ಡಿಕ್ಕಿ ಹೊಡೆದು, ರಸ್ತೆಗೆ ಬಿದ್ದ ಕೂಡಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಬಳಿಕ ಆರೋಪಿಗಳು ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಗೆ ಗ್ಯಾಂಗ್‌ವಾರ್ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ 2022ರ ಮೇ ತಿಂಗಳಲ್ಲಿಯೂ ಆರಿಫ್ ಮೇಲೆ ಕೊಲೆ ಯತ್ನ ನಡೆದಿತ್ತು. ಬೆಳಗ್ಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬಜಾಲ್ ಭಾಗದಲ್ಲಿ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಚೂರಿ ಇರಿದು ಗಾಯಗೊಳಿಸಿತ್ತು.
ವಿವಾಹಿತನಾಗಿದ್ದ ಆರಿಫ್ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದು, ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮೂಲತಃ ಕುದ್ರೋಳಿ ನಿವಾಸಿಯಾಗಿದ್ದ ಆತ, ಕಳೆದ ಹಲವು ವರ್ಷಗಳಿಂದ ಅಜ್ಜಿನಡ್ಕ ಸಮೀಪ ಮುಳ್ಳುಗುಡ್ಡೆ ಪ್ರದೇಶದಲ್ಲಿ ಕುಟುಂಬ ಸಮೇತ ವಾಸವಾಗಿದ್ದನು. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

