RCB : ಈ ಸಲ ಕಪ್ ನಮ್ದೇ! ನಿನ್ನೆ ನಮ್ಮ ವರದಿಗಾರನೊಂದಿಗೆ ಮಾತಾಡಿದ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳು ಪದೇಪದೆ ಹೇಳಿದ ಮಾತಿದು. 18 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಇತಿಹಾಸದಲ್ಲಿ 4ನೇ ಬಾರಿಗೆ ಫೈನಲ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲದಿರೋದು ಸೋಜಿಗ ಮತ್ತು ಅಷ್ಟೇ ನೋವಿನ ಸಂಗತಿ.
ಹಾಗೆ ನೋಡಿದರೆ, ಆರ್ಸಿಬಿ ಕೇವಲ ಕನ್ನಡಿಗರು ಮಾತ್ರ ಅಲ್ಲ, ಬಹುತೇಕ ಭಾರತೀಯರ ಅಚ್ಚುಮೆಚ್ಚಿನ ತಂಡ. ನಿನ್ನೆ ಚಂಡೀಗಢ್ನ ಯಾದವೀಂದ್ರ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ಸಿಬಿ 8 ವಿಕೆಟ್ಗಳಿಂದ ಸುಲಭವಾಗಿ ಬಗ್ಗುಬಡಿದ ಮೇಲೆ ಆರ್ಸಿಬಿ ಅಭಿಮಾನಿಗಳ ಹರ್ಷ, ಉತ್ಸಾಹ ಮತ್ತು ಸೆಲೆಬ್ರೇಷನ್ ಮುಗಿಲು ಮುಟ್ಟಿತ್ತು.
ಸ್ಪಷ್ಟ ಸಂದೇಶ ರವಾನಿಸಿದ ವಿಜಯ ಮಲ್ಯ :
ಈ ಗೆಲುವಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ ಮಲ್ಯ, ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್ ಖಾತೆಯನ್ನು ಆರ್ಸಿಬಿ ತಂಡದ ಪರಾಕ್ರಮವನ್ನು ಕೊಂಡಾಡಿರುವ ಮಲ್ಯ ಫೈನಲ್ ಪಂದ್ಯಕ್ಕೂ ಮುನ್ನ ರಾಯಲ್ ಪಡೆಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಏಕಪಕ್ಷೀಯವಾಗಿ ಗೆಲುವು ಸಾಧಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ಒತ್ತಡದ ಸ್ಪರ್ಧೆಯಲ್ಲಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ ಇದು. ಪ್ರಶಸ್ತಿಯತ್ತ ಮುಂದುವರಿಯಿರಿ ಎಂದು ವಿಜಯ ಮಲ್ಯ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಫೈನಲ್ ಪಂದ್ಯದಲೂ ಧೈರ್ಯದಿಂದ ಆಡಬೇಕೆಂಬ ಸಂದೇಶವನ್ನು ಸಹ ರವಾನಿಸಿದ್ದಾರೆ. ಇದೀಗ ವಿಜಯ ಮಲ್ಯ ಅವರ ಎಕ್ಸ್ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಗಳು ಸಹ ವ್ಯಕ್ತವಾಗುತ್ತಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ :
ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಚಂಡೀಗಢ್ನ ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 14.1 ಓವರ್ಗಳಲ್ಲಿ 101 ರನ್ ಬಾರಿಸಿ ಆಲೌಟ್ ಆಯಿತು.
102 ರನ್ಗಳ ಸುಲಭ ಗುರಿ ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ಫಿಲ್ ಸಾಲ್ಟ್ (56) ಸ್ಪೋಟಕ ಆರಂಭ ಒದಗಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10 ಓವರ್ಗಳಲ್ಲಿ 106 ರನ್ ಬಾರಿಸಿ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.

