ಬೀದರ್: ಹಂದಿ ಸಾಕಾಣಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವ ವಕೀಲನ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಬಳಿ ನಡೆದಿದೆ.
ಬೆನ್ ಚಿಂಚೊಳ್ಳಿ ಗ್ರಾಮದ ವಕೀಲ ಅನಿಲ್‌ಕುಮಾರ್ (26) ಮೇಲೆ ಅವರದೇ ಸಂಬಂಧಿಗಳು ಹಲ್ಲೆ ನಡೆಸಿದ್ದಾರೆ. ಹಂದಿ ಸಾಕಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಗಲಾಟೆ ಉಂಟಾಗಿದ್ದು, ಈ ಸಂಬಂಧ ದೂರು ನೀಡಲು ಹಳ್ಳಿಖೇಡ್ ಪೊಲೀಸ್ ಠಾಣೆಗೆ ತೆರಳಲು ಅನಿಲ್‌ಕುಮಾರ್ ಬೈಕ್‌ನಲ್ಲಿ ಹೊರಟಿದ್ದರು.
ಈ ವೇಳೆ ಮಾರ್ಗ ಮಧ್ಯೆ ಆರೋಪಿಗಳು ಅನಿಲ್‌ಕುಮಾರ್‌ರನ್ನು ತಡೆದು ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಯತ್ನ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅನಿಲ್‌ಕುಮಾರ್ ಅವರನ್ನು ತಕ್ಷಣ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿ ಹಳ್ಳಿಖೇಡ್ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

