ಮೈಸೂರು, ಫೆ.20: ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7ರಂದು ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನಾರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಹೊರಡಿಸಲಾಗುವ ಆದೇಶದಲ್ಲಿನ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬಹುತೇಕ ನಾಳೆ (ಶನಿವಾರ)ಯಿಂದ ಸಫಾರಿ ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ಆದೇಶದಲ್ಲಿನ ಷರತ್ತುಗಳ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನವೆಂಬರ್ 7ರ ಮೊದಲು ಬಳಕೆಯಲ್ಲಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಮಾತ್ರ ಬಳಕೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಸ್‌ಗಳ ಮೂಲಕ ಸಫಾರಿ ನಡೆಸಬೇಕು. ಕ್ಯಾಂಪರ್ ಹಾಗೂ ಜೀಪ್‌ಗಳ ಬಳಕೆಯನ್ನು ಅತ್ಯಂತ ಕಡಿಮೆಗೊಳಿಸುವ ಕುರಿತು ಸ್ಪಷ್ಟ ಆದೇಶ ಹೊರಡಿಸಲಾಗುವುದು ಎಂದರು.
ವನ್ಯಜೀವಿ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ
ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅರಣ್ಯ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ. ವನ್ಯಜೀವಿಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು. ಜೀವಹಾನಿ ಹಾಗೂ ಬೆಳೆಹಾನಿ ತಪ್ಪಿಸುವುದು ಅರಣ್ಯ ಇಲಾಖೆಯ ಮುಖ್ಯ ಕರ್ತವ್ಯ ಎಂದು ಸಚಿವರು ತಿಳಿಸಿದ್ದಾರೆ.
ಬಂಡಿಪುರ ಅರಣ್ಯದ ಗಡಿಯಲ್ಲಿ ಸುಮಾರು 100 ಕಿ.ಮೀ. ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಪ್ರತಿ 5 ಕಿ.ಮೀ.ಗೆ ಒಂದರಂತೆ 25 ಶಿಬಿರಗಳನ್ನು ಸ್ಥಾಪಿಸಿ, ಸ್ಥಳೀಯರನ್ನು ‘ಕಾಡಿನ ಮಿತ್ರ’ರಾಗಿ ನೇಮಕ ಮಾಡಿ ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಥರ್ಮಲ್ ಡ್ರೋನ್ ಸೇರಿದಂತೆ ಅಗತ್ಯ ಸೌಲಭ್ಯಗಳಿಗಾಗಿ ಲಿಖಿತ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಾನವ ಜೀವ ರಕ್ಷಣೆ ಪ್ರಥಮ ಆದ್ಯತೆ
ವನ್ಯಜೀವಿ ಸಂರಕ್ಷಣೆಯ ಜೊತೆಗೆ ಕಾಡಿನಂಚಿನಲ್ಲಿ ವಾಸಿಸುವ ನಿವಾಸಿಗಳ ಜೀವ ರಕ್ಷಣೆಗೂ ಆದ್ಯತೆ ನೀಡಬೇಕು. ಬೆಳೆ ರಕ್ಷಣೆಗೆ ಕೂಡ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಫಾರಿಯಿಂದ ಬರುವ ಆದಾಯದ ಶೇ.35ರಷ್ಟು ಹಣವನ್ನು ಅರಣ್ಯದಂಚಿನ ಯುವಜನರಿಗೆ ಕೌಶಲ್ಯ ತರಬೇತಿ, ಜಾನುವಾರುಗಳಿಗೆ ಮೇವು ಹಾಗೂ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿನಿಯೋಗಿಸಲು ನಿರ್ಧರಿಸಲಾಗಿದೆ.
ಸ್ಥಳೀಯರ ಸಹಕಾರ ಅವಶ್ಯ
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸ್ಥಳೀಯರ ಸಹಕಾರ ಅತ್ಯಗತ್ಯವಾಗಿದ್ದು, ಅರಣ್ಯ ಸಿಬ್ಬಂದಿ ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.
ಇ-ಗಸ್ತು ಮತ್ತು ಕಮಾಂಡ್ ಕೇಂದ್ರ
ಇಲಾಖೆಯ ಕಾಯಂ ಸಿಬ್ಬಂದಿ ಕಡ್ಡಾಯವಾಗಿ ಅರಣ್ಯ ಇಲಾಖೆಯ ಇ-ಗಸ್ತು ತಂತ್ರಾಂಶ ಬಳಕೆ ಮಾಡಬೇಕು. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ವ್ಯವಸ್ಥೆ ಬಳಸುವಂತೆ ಸೂಚಿಸಲಾಗಿದೆ. ಸಮಗ್ರ ಕಮಾಂಡ್ ಕೇಂದ್ರದ ಮೂಲಕ ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಟ್ಟು, 1926 ದೂರವಾಣಿ ಸಂಖ್ಯೆಗೆ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ನಿರ್ದೇಶಿಸಲಾಗಿದೆ.
ಕಾಡ್ಗಿಚ್ಚು ನಿಯಂತ್ರಣಕ್ಕೆ ಒತ್ತು
ಬೇಸಿಗೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಿಆರ್ ಟಿ ಹುಲಿಸಂರಕ್ಷಿತ ಪ್ರದೇಶಗಳಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹುಲಿ, ಚಿರತೆ, ಆನೆ ಸೇರಿದಂತೆ ವನ್ಯಜೀವಿಗಳಿಗೆ ಆಹಾರ ಮತ್ತು ನೀರಿನ ಕೊರತೆ ಉಂಟಾಗದಂತೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

