ನವದೆಹಲಿ : ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಎಸ್‌ಐಟಿ ಪೊಲೀಸರು ಸಲ್ಲಿಸಿದ್ದ ಮೇಲನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸರ್ವೋಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠದ ಮುಂದೆ ಇಂದು ವಿಚಾರಣೆಗೆ ಬಂದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಮತ್ತು ರಾಜಕೀಯ ಕುಟುಂಬವೆಂಬ ಒಂದೇ ಕಾರಣಕ್ಕೆ ಜಾಮೀನನ್ನು ರದ್ದುಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದರಿಂದಾಗಿ ಎಸ್‌ಐಟಿಗೆ ಹಿನ್ನಡೆಯಾಗಿದ್ದು, ಭವಾನಿ ರೇವಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಎಸ್‌ಐಟಿ ಕೆಲವು ಕ್ರಮಗಳನ್ನು ನ್ಯಾಯಪೀಠ ತಳ್ಳಿಹಾಕಿದ್ದು, ಈ ಸಂದರ್ಭದಲ್ಲಿ ನೀವು ಜಾಮೀನು ರದ್ದುಮಾಡುವಂತೆ ಇಲ್ಲಿಯವರೆಗೂ ಬಂದಿರುವುದು ಸರಿಯಲ್ಲ ಎಂದು ಹೇಳಿದೆ.
ಪ್ರಕರಣದ ತನಿಖೆ ದಾರಿ ತಪ್ಪಿಲ್ಲ. ಹೀಗಿರುವಾಗ ಇದರಲ್ಲಿ ಹಸ್ತಕ್ಷೇಪ ಮಾಡಿ ಜಾಮೀನು ರದ್ದುಮಾಡುವುದು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.