ನವದೆಹಲಿ: ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ದೇಶದ ತೃತೀಯ ನಾಗರಿಕ ಗೌರವವಾದ ಪದ್ಮಭೂಷಣ ಗೌರವ ಸಂದಿದೆ. 76 ನೇ ಗಣರಾಜ್ಯೋತ್ಸವದ ಮುನ್ನದಿನ ನಟ ಅನಂತ್ ನಾಗ್ಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನ ಘೋಷಿಸಿತ್ತು.
ಸರಳವಾದ ಕುರ್ತಾ ಧರಿಸಿ ಬಂದಿದ್ದ ಅನಂತ್ ನಾಗ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಅವರ ಪತ್ನಿ ಗಾಯತ್ರಿ, ಮಗಳು ಹಾಗೂ ಅಳಿಯ ಸಂತೋಷದಿಂದ ಚಪ್ಪಾಳೆ ತಟ್ಟುತ್ತಾ ಅಭಿನಂದಿಸಿದರು. ಅನಂತ್ ನಾಗ್ 5 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟರಾಗಿ ಅಭಿನಯಿಸುತ್ತಿದ್ದಾರೆ. ಚಿತ್ರರಂಗ ಮಾತ್ರವಲ್ಲದೆ ರಾಜಕೀಯಕ್ಕೂ ಪದಾರ್ಪಣೆ ಮಾಡಿದ್ದ ಅನಂತ್ ನಾಗ್ ಕರ್ನಾಟಕದಿಂದ ಎಂಎಲ್ಎ ಹಾಗೂ ಎಂಎಲ್ಸಿಯಾಗಿಯೂ ಆಯ್ಕೆಯಾಗಿದ್ದರು. ಕಲಾ ರಂಗದಲ್ಲಿ ಅನಂತ್ ನಾಗ್ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ.
948ರ ಸೆಪ್ಟಂಬರ್ 4ರಂದು ಅನಂತ್ ನಾಗ್ ಅವರು ಉತ್ತರ ಕನ್ನಡದ ಶಿರಳ್ಳಿ ಎಂಬಲ್ಲಿ ಜನಿಸಿದರು. 1973ರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ಅನಂತ್ ನಾಗ್, ಆನಂತರದಲ್ಲಿ ಶ್ಯಾಮ್ ಬೆನಗಲ್ ಅವರ ಅಂಕುರ್, ಬಯಲುದಾರಿ, ನಾ ನಿನ್ನ ಬಿಡಲಾರೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಆರಂಭಿಕ ಚಿತ್ರ ಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಿದ ಅನಂತ್ ನಾಗ್ ಅವರು ಆನಂತರ ಹಿಂದಿರುಗಿ ನೋಡಲಿಲ್ಲ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅನಂತ್ ನಾಗ್.

