ಲಕ್ನೋ: ಮದುವೆ ಮುಗಿಸಿ ವರನ ಮನೆಗೆ ತೆರಳುತ್ತಿದ್ದ ವೇಳೆ ಕಾರು ಆಟೋ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತ ಜೋಡಿ ಸೇರಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ಬಿಜ್ನೋರ್‌ನಲ್ಲಿ ಭಾರೀ ಮಂಜು ಕವಿದ್ದಿತ್ತು. ಈ ವೇಳೆ ಮದುವೆ ಮುಗಿಸಿ ಬರುತ್ತಿದ್ದವರ ವಾಹನ ವೇಗವಾಗಿ ಬಂದು ಟೆಂಪೋಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಏಳು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ ಜಾರ್ಖಂಡ್‌ನಲ್ಲಿ ಮದುವೆ ಸಂಭ್ರಮ ನಡೆದಿತ್ತು. ಬಿಜ್ನೋರ್‌ನ ಧಂಪುರದಲ್ಲಿರುವ ವರನ ಮನೆಗೆ ಹಿಂದಿರುಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ಅವರಿದ್ದ ವಾಹನ ಟೆಂಪೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಹಳ್ಳಕ್ಕೆ ಬಿದ್ದಿವೆ.
ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ವಾಹನದಲ್ಲಿ ವಧು, ವರ, ಅವರ ಚಿಕ್ಕಮ್ಮ ಮತ್ತು ಅವರ ಸಹೋದರ ಸೇರಿದಂತೆ 11 ಮಂದಿ ಇದ್ದರು ಎಂದು ಹೇಳಲಾಗಿದೆ. ಅಪಘಾತದಲ್ಲಿ ದಂಪತಿಗಳು ಮತ್ತು ಅವರ ನಾಲ್ವರು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.