ಬೆಂಗಳೂರು, ಫೆಬ್ರವರಿ 20: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ವಿರೋಧ ಪಕ್ಷದ ನಾಯಕ R. Ashoka ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಪೂರ್ವನಿಯೋಜಿತವಾಗಿದ್ದು, ಶಿವಾಜಿ ಪ್ರತಿಮೆಗೆ ಕಲ್ಲು ಹೊಡೆದು ಅವಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಶಿವಾಜಿ ಹಿಂದೂ ಸಮುದಾಯದ ಸಂಕೇತವಾಗಿದ್ದು, ಇಂತಹ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿ ಪೊಲೀಸರಿಗೆ ಗಾಯಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಅಶೋಕ್ ಹೇಳಿದರು. ಮಂಡ್ಯದಲ್ಲಿ ಗಣೇಶ ಮೆರವಣಿಗೆಯಲ್ಲೂ ಇಂತಹ ಘಟನೆ ನಡೆದಿತ್ತು ಎಂದು ಅವರು ನೆನಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ ಅವರು, ಮುಸ್ಲಿಮರ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಕಾಂಗ್ರೆಸ್ ಹೇಳಿದೆ ಎಂದು ಹೇಳಿದರು. ಶಿವಾಜಿ ಮೆರವಣಿಗೆಯ ಮೇಲೆ ನಡೆದ ದಾಳಿಗೆ ಕಾಂಗ್ರೆಸ್ ನೇರ ಹೊಣೆ ಎಂದು ಅವರು ವಾಗ್ದಾಳಿ ನಡೆಸಿದರು.
ಘಟನೆಯ ಸಂಬಂಧ ಗುಂಡಾ ಕಾಯ್ದೆ ಅನ್ವಯಿಸಿ ಆರೋಪಿಗಳನ್ನು ಕನಿಷ್ಠ ಒಂದು ವರ್ಷ ಜೈಲಿಗೆ ಹಾಕಬೇಕು. ಗುಂಡಾ ಕಾಯ್ದೆ ಜಾರಿಗೆ ತರದಿದ್ದರೆ ಸರ್ಕಾರ ಅವರೊಂದಿಗೆ ಶಾಮೀಲಾಗಿರುವಂತೆ ಅರ್ಥ ಮಾಡಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಬೆಂಬಲ ಇದೆಯೋ ಎಂಬ ಅನುಮಾನವೂ ವ್ಯಕ್ತಪಡಿಸಿದರು.
ಶಿವಾಜಿಯನ್ನು ಪ್ರೀತಿಸುವ ಮರಾಠ ಹಾಗೂ ಹಿಂದೂ ಸಮುದಾಯದವರು ಶಾಂತಿ ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.
ಇನ್ನೊಂದೆಡೆ, ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲವಾದರೂ ಸ್ವಾಗತಾರ್ಹ ಎಂದು ಹೇಳಿದರು. ಹಿಮಾಚಲ ಪ್ರದೇಶ ಹಾಗೂ ಕೇರಳದ ಉದಾಹರಣೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರದ ಹಣಕಾಸು ಸ್ಥಿತಿ ದಿವಾಳಿಯಾಗಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಬಸ್‌ಗಳಿಗೆ ಹಣ ಇಲ್ಲ, ಸಿಬ್ಬಂದಿಗೆ ಸಂಬಳ ಇಲ್ಲ, ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಸಿಟಿ ಸ್ಕ್ಯಾನ್‌ಗೆ ₹120 ಕೋಟಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸಾರಿಗೆ ನೌಕರರಿಗೆ ವೇತನ ನೀಡಲು ಹಣವಿಲ್ಲ ಎಂದು ಆರೋಪಿಸಿದರು. ಗೃಹ ಲಕ್ಷ್ಮಿ ಯೋಜನೆಯ ಹಣವೂ ನಿಂತಿದೆ ಎಂದು ಹೇಳಿದರು.
ಬಾಗಲಕೋಟೆಗೆ ಭೇಟಿ ನೀಡುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ತೀರ್ಮಾನಿಸಲಾಗುವುದು ಎಂದು ಅಶೋಕ್ ತಿಳಿಸಿದರು. ಘಟನೆ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

