ಶಿವಮೊಗ್ಗ (ಜ.14): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಕ್ರಾಸ್ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ನಡೆದ ಮುಖಾಮುಖಿ ಡಿಕ್ಕಿ ಈ ದುರ್ಘಟನೆಗೆ ಕಾರಣವಾಗಿದೆ.
ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ನಿವಾಸಿಗಳಾದ ಮುಸ್ಲಿಂ ಕುಟುಂಬವೊಂದು ಚೆನ್ನಗಿರಿಯಿಂದ ಶೃಂಗೇರಿಯತ್ತ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಇದೇ ವೇಳೆ ಮಂಗಳೂರಿನಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಭಾರತೀಪುರ ಕ್ರಾಸ್ ಬಳಿ ರಭಸದ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಈ ದುರ್ಘಟನೆಯಲ್ಲಿ ಫಾತಿಮಾ (70), ರಿಹಾನ್ (15), ರಾಹಿಲ್ (9) ಹಾಗೂ ಝಯಾನ್ (12) ಮೃತಪಟ್ಟಿದ್ದಾರೆ. ಮೃತರೆಲ್ಲರೂ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದವರು ಎಂದು ಗುರುತಿಸಲಾಗಿದೆ. ಮಕ್ಕಳ ಅಕಾಲಿಕ ಸಾವು ಹಾಗೂ ಹಿರಿಯರ ಅಗಲಿಕೆಯಿಂದ ಇಡೀ ಮೆಣಸೆ ಗ್ರಾಮದಲ್ಲಿ ಶೋಕಸಾಗರ ಆವರಿಸಿದೆ.
ಕಾರಿನಲ್ಲಿದ್ದ ಝರೀನಾ (35), ರಿಹ್ಹಾ (12) ಮತ್ತು ರಿಯಾಜ್ (35) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಅಪಘಾತದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಬಸ್‌ನ ಮುಂಭಾಗಕ್ಕೂ ಹಾನಿಯಾಗಿದೆ. ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ಮುಂದುವರಿದಿದೆ.

