ತಿರುಪತಿ : ಇತ್ತೀಚೆಗೆ ಶಿವಣ್ಣ ನಟನೆಯ ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಸಿನಿಮಾದ ಸಕ್ಸಸ್ ಒಂದು ಕಡೆಯಾದ್ರೆ, ಮತ್ತೊಂದೆಡೆ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಡಿ ಕೊಟ್ಟಿದ್ದಾರೆ.
ನಟ ಶಿವರಾಜ್‌ಕುಮಾರ್ ಹಾಗೂ ಅವರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಲ್ಲದೇ ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಕೂಡ ಕೂದಲು ತೆಗೆಸಿದ್ದಾರೆ. ಆ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈಲ್ ಆಗಿವೆ.

ಶಿವರಾಜ್‌ಕುಮಾರ್ ಅವರು ತಮಗಿರೋ ಕೆಲವು ಸಿನಿಮಾ ಕಮಿಟ್ಮೆಂಟ್ಗಳನ್ನು ಪೂರ್ಣಗೊಳಿಸಿದ್ದಾರೆ. ಅದಕ್ಕೆ ಕಾರಣ ಅನಾರೋಗ್ಯ. ಅವರು ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಬೇಕಿದೆ. ಹೀಗಾಗಿ, ಕೆಲವು ಸಿನಿಮಾ ಕೆಲಸಗಳನ್ನು ಮುಂದಕ್ಕೆ ಹಾಕಿದ್ದಾರೆ. ಈಗ ಅವರು ನಟಿಸಿರೋ ‘45’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಈ ಸಿನಿಮಾ ಕೂಡ ಶೀಘ್ರವೇ ರಿಲೀಸ್ ಆಗುವ ಸಾಧ್ಯತೆ ಇದೆ. ಶಿವಣ್ಣ ಕುಟುಂಬದ ಜೊತೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಹಾಗೂ ಶಿವಣ್ಣ ಪುತ್ರಿ ನಿವೇದಿತಾ ಸಹ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

