ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ಬಜೆಟ್ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿಯ ಬಜೆಟ್ “ಕೌದಿ ಬಜೆಟ್” ಆಗಿದ್ದು, ಗ್ಯಾರೇಜ್‌ನ ವ್ಯರ್ಥ ವಸ್ತುಗಳನ್ನು ಬಳಸಿ ಹೊಲಿದ ಬಟ್ಟೆಯಂತಿದೆ ಎಂದು ವ್ಯಂಗ್ಯವಾಡಿದರು.
ವಿವಿಧ ಇಲಾಖೆಗಳ ಅನುದಾನವನ್ನು ಇಲ್ಲಿ ಅಲ್ಲಿ ಕ್ರೋಡೀಕರಿಸಿ ಬಜೆಟ್ ಮಂಡನೆ ಮಾಡಲಾಗಿದೆ. ಸರ್ಕಾರದ ಬಳಿ ಹಣದ ಕೊರತೆ ಇರುವುದರಿಂದ ಈ ಬಜೆಟ್ ತನ್ನ ಮಹತ್ವ ಕಳೆದುಕೊಂಡಿದೆ ಎಂದು ಅವರು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳ ಅನುದಾನವನ್ನು ಬಳಸಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯ ವಿಳಂಬದ ಕುರಿತೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಕ್ಕೂ ಹಾಗೂ ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಶಿ ಅವರಿಗೆ ಚುನಾವಣೆಯನ್ನು ನಡೆಸುವ ಆಸಕ್ತಿ ಇಲ್ಲ ಎಂದು ಆರೋಪಿಸಿದರು. ಈ ವಿಚಾರವಾಗಿ ಈಗಾಗಲೇ ಕೋರ್ಟ್‌ಗೆ ಹೋಗಿರುವುದಾಗಿ ಹೇಳಿದ ಅವರು, ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

