ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್‌ಒಜಿ) ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ.
ಹುತಾತ್ಮ ಪೊಲೀಸ್ ಸಿಬ್ಬಂದಿಯನ್ನು ಪೂಂಚ್ ಜಿಲ್ಲೆಯ ಮೆಂಧರ್ ನಿವಾಸಿ ಅಮ್ಜದ್ ಪಠಾಣ್ ಎಂದು ಗುರುತಿಸಲಾಗಿದೆ. ಸೋಮವಾರ ಉಧಂಪುರದ ಮಜಲ್ಟಾ ಪ್ರದೇಶದ ಸೋಹನ್ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದಾಗ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿ ಆಧಾರಿತ ಈ ಕಾರ್ಯಾಚರಣೆಯನ್ನು ಜಮ್ಮು–ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಸಂಯುಕ್ತವಾಗಿ ನಡೆಸಿದ್ದು, ಎನ್‌ಕೌಂಟರ್ ಇನ್ನೂ ಮುಂದುವರಿದಿದೆ ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.
ಇದೇ ವೇಳೆ, ಜಮ್ಮು ವಲಯದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಭೀಮ್ ಸೇನ್ ಟುಟಿ ಅವರು, ನಿಖರ ಮಾಹಿತಿ ದೊರಕಿದ ಬಳಿಕ ಎನ್‌ಕೌಂಟರ್ ಪ್ರಾರಂಭಿಸಲಾಯಿತು ಎಂದು ತಿಳಿಸಿದ್ದಾರೆ. ವಿಶೇಷ ಕಾರ್ಯಾಚರಣೆ ಗುಂಪಿನ ಜೊತೆಗೆ ಸೇನೆ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

