ಬೆಂಗಳೂರು, ಏಪ್ರಿಲ್ 9: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಚಾರಣಿಗರ ನಾಪತ್ತೆ ಪ್ರಕರಣಗಳ ಹಿನ್ನೆಲೆ, ಟ್ರೆಕ್ಕಿಂಗ್‌ಗೆ ತೆರಳುವವರ ಸುರಕ್ಷತೆಯನ್ನು ಖಚಿತಪಡಿಸಲು ರಾಜ್ಯ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಚಾರಣಿಗರ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಸಮಗ್ರ ಮಾರ್ಗಸೂಚಿ (SOP) ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಪರ್ವತದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ ಎಂಬ ಮಹಿಳೆ ಮೂರು ದಿನಗಳ ಕಾಲ ಕಾಡಿನಲ್ಲಿ ನಾಪತ್ತೆಯಾಗಿದ್ದ ಘಟನೆ ಆತಂಕ ಮೂಡಿಸಿತ್ತು. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿದ್ದ ಪ್ರಕರಣವೂ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕಠಿಣ ಕ್ರಮ ಅಗತ್ಯವೆಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಚಾರಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮತ್ತು ಕಟ್ಟುನಿಟ್ಟಿನ SOP ರೂಪಿಸಲು ಆದೇಶಿಸಿದ್ದಾರೆ. ಇದರ ಮೂಲಕ ಚಾರಣಕ್ಕೆ ಮಾನದಂಡಗಳನ್ನು ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ.
ಚಾರಣಿಗರ ಮೇಲ್ವಿಚಾರಣೆಗೆ ತಂತ್ರಜ್ಞಾನ ಬಳಕೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅರಣ್ಯ ಇಲಾಖೆಯ ಇ-ಗಸ್ತು (e-Patrolling) ವ್ಯವಸ್ಥೆಯನ್ನು ವಿಸ್ತರಿಸುವುದರ ಜೊತೆಗೆ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಎಂ-ಸ್ಟ್ರೈಪ್ಸ್ (M-STrIPES) ಮಾದರಿಯಲ್ಲಿ ಚಾರಣಿಗರಿಗಾಗಿ ಪ್ರತ್ಯೇಕ ಟ್ರ್ಯಾಕಿಂಗ್ ಆಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಈ ಆಪ್ ಅನ್ನು ಚಾರಣ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್‌ಗಳಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ದಾರಿ ತಪ್ಪಿದವರ ಸ್ಥಳವನ್ನು ತಕ್ಷಣ ಪತ್ತೆಹಚ್ಚಿ ಶೋಧ ಕಾರ್ಯಾಚರಣೆಯನ್ನು ವೇಗಗೊಳಿಸಲು ಸಾಧ್ಯವಾಗುತ್ತದೆ.
ಇದರ ಜೊತೆಗೆ, ಚಾರಣಿಗರ ಭದ್ರತೆಯನ್ನು ಹೆಚ್ಚಿಸಲು ಗುಂಪು ವಿಮೆ (Group Insurance) ಕಡ್ಡಾಯಗೊಳಿಸುವ ಯೋಜನೆಯೂ ಮುಂದಾಗಿದೆ. ಅಪಘಾತ ಅಥವಾ ಅನಾಹುತ ಸಂಭವಿಸಿದರೆ ಚಾರಣಿಗರಿಗೆ ಆರ್ಥಿಕ ಭದ್ರತೆ ಒದಗಿಸುವುದು ಇದರ ಉದ್ದೇಶವಾಗಿದೆ.
ಚಾರಣದ ವೇಳೆ ಮಾರ್ಗದರ್ಶನ ನೀಡುವ ನೇಚರ್ ಗೈಡ್‌ಗಳ ಪಾತ್ರವನ್ನೂ ಬಲಪಡಿಸಲಾಗುತ್ತಿದೆ. ಗೈಡ್‌ಗಳಿಗೆ ಕಡ್ಡಾಯವಾಗಿ ವೈರ್‌ಲೆಸ್ ಸೆಟ್‌ಗಳನ್ನು ಒದಗಿಸುವ ಮೂಲಕ ಅರಣ್ಯ ಇಲಾಖೆ ಮತ್ತು ರಕ್ಷಣಾ ತಂಡಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ, ಚಾರಣಿಗರೊಂದಿಗೆ ತೆರಳುವ ಗೈಡ್‌ಗಳ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿಗದಿಪಡಿಸಲು ಸಚಿವರು ಸೂಚಿಸಿದ್ದಾರೆ.
ಈ ಕ್ರಮಗಳ ಮೂಲಕ ಚಾರಣದ ವೇಳೆ ಸಂಭವಿಸಬಹುದಾದ ಅಪಾಯಗಳನ್ನು ತಡೆಯುವ ಜೊತೆಗೆ, ಸುರಕ್ಷಿತ ಮತ್ತು ನಿಯಂತ್ರಿತ ಚಾರಣ ವ್ಯವಸ್ಥೆ ರೂಪಿಸುವತ್ತ ಸರ್ಕಾರ ಮುಂದಾಗಿದೆ.

