ಬೆಂಗಳೂರು, ಏಪ್ರಿಲ್ 08: ಕರ್ನಾಟಕದಲ್ಲಿ ಆಟೋಗಳಿಗೆ ಅಗತ್ಯವಾದ ಗ್ಯಾಸ್ ಸಿಗದೇ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನವಿಡೀ ದುಡಿಮೆ ಬಿಟ್ಟು ಬಂಕ್‌ಗಳ ಬಳಿ ಗಂಟೆಗಟ್ಟಲೇ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪರಿಣಾಮವಾಗಿ ಅವರ ಆದಾಯಕ್ಕೂ ಹೊಡೆತ ಬಿದ್ದಿದೆ. ಹಲವು ಕಡೆಗಳಲ್ಲಿ ಕಿಲೋಮೀಟರ್‌ಗಳಷ್ಟು ಉದ್ದದ ಸಾಲುಗಳು ಕಾಣಿಸಿಕೊಂಡಿದ್ದು, ಚಾಲಕರು ಹೈರಾಣಾಗಿದ್ದಾರೆ.
ಈ ನಡುವೆ ಆಟೋ ಎಲ್‌ಪಿಜಿ ಕೊರತೆ ಕುರಿತು ವದಂತಿಗಳು ಹರಿದಾಡುತ್ತಿದ್ದಂತೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪನಿಗಳಿಂದ ನಿರಂತರವಾಗಿ ಗ್ಯಾಸ್ ಪೂರೈಕೆ ನಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದೆ.
ಏಪ್ರಿಲ್ 2ರಿಂದ ಏಪ್ರಿಲ್ 6ರವರೆಗೆ ಪ್ರತಿದಿನವೂ ಗ್ಯಾಸ್ ಸರಬರಾಜು ನಡೆದಿದ್ದು, ದಿನಕ್ಕೆ 83ರಿಂದ 94 ಮೆಟ್ರಿಕ್ ಟನ್‌ವರೆಗೆ ಪೂರೈಕೆ ಮಾಡಲಾಗಿದೆ. ಏಪ್ರಿಲ್ 5ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಗ್ಯಾಸ್ ವಿತರಣೆ ಆಗಿರುವುದಾಗಿ ಮಾಹಿತಿ ನೀಡಲಾಗಿದೆ. ಇದರಿಂದ ಆಟೋ ಚಾಲಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.
ಇನ್ನು ಎಲ್‌ಪಿಜಿ ಪೂರೈಕೆ ವ್ಯವಸ್ಥೆಯನ್ನು ಸರ್ಕಾರ ಸಮೀಕ್ಷೆ ಮಾಡುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೂರೈಕೆಯ ಮೇಲೆ ನಿರಂತರ ನಿಗಾ ಇಡಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಜೊತೆಗೆ, ವದಂತಿಗಳಿಗೆ ಕಿವಿಗೊಡದೇ ಸಹಕರಿಸುವಂತೆ ಆಟೋ ಚಾಲಕರಿಗೆ ಮನವಿ ಮಾಡಲಾಗಿದೆ.
ಇದರ ಜೊತೆಗೆ ಕೈಗಾರಿಕಾ ವಲಯಗಳಿಗೆ ಎಲ್‌ಪಿಜಿ ಹಂಚಿಕೆ ಕುರಿತು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ವಿವಿಧ ಕೈಗಾರಿಕೆಗಳಿಗೆ ಶೇ.70ರಷ್ಟು LPG ಹಂಚಿಕೆ, ಪಿಎನ್‌ಜಿ ಬಳಕೆಯನ್ನು ಉತ್ತೇಜಿಸುವ ರಾಜ್ಯಗಳಿಗೆ ಹೆಚ್ಚುವರಿ ಶೇ.10ರಷ್ಟು ಮೀಸಲು, ಹಾಗೂ ಫಾರ್ಮಾ, ಆಹಾರ ಮತ್ತು ಕೃಷಿ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ನೈಸರ್ಗಿಕ ಅನಿಲ ಬಳಕೆ ಸಾಧ್ಯವಿಲ್ಲದ ಘಟಕಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಇಂಧನ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಹೊಂದಲಾಗಿದೆ.

