ಬೆಂಗಳೂರು: ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಂದು ಉತ್ತೇಜನಕಾರಿ ಬೆಳವಣಿಗೆ ಕಂಡುಬಂದಿದ್ದು, ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಲು ತೀರ್ಮಾನಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ‘ಲ್ಯಾಂಡ್ ಲಾರ್ಡ್’ ಸಿನಿಮಾಗೆ ಶುಭ ಹಾರೈಸಿದ್ದ ಸಿಎಂ, ಇದೀಗ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಾತಿ ಆಧಾರಿತ ಶೋಷಣೆ ಮತ್ತು ಸಾಮಾಜಿಕ ಅಸಮಾನತೆಗಳ ಕುರಿತ ವಿಷಯವನ್ನು ಒಳಗೊಂಡಿರುವ ಈ ಸಿನಿಮಾ, ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಮೌಲ್ಯಯುತ ಸಂದೇಶ ಹಾಗೂ ಸಾಮಾಜಿಕ ಪರಿವರ್ತನೆ ಸಾಧಿಸಲು ಚಿತ್ರಮಾಧ್ಯಮದ ಪ್ರಭಾವ ಮಹತ್ವದ್ದಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ ಸಿನಿಮಾಗಳ ಪರ ನಿಲ್ಲುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದೇ ಹಿನ್ನೆಲೆ, ‘ಲ್ಯಾಂಡ್ ಲಾರ್ಡ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಸರ್ಕಾರ ಬೆಂಬಲ ಸೂಚಿಸಿದೆ.
ಚಿತ್ರಕ್ಕೆ ತೆರಿಗೆ ವಿನಾಯಿತಿ ದೊರೆತಿರುವುದರಿಂದ ನಿರ್ಮಾಪಕರು ಹಾಗೂ ಚಿತ್ರತಂಡದಲ್ಲಿ ಸಂತಸ ವ್ಯಕ್ತವಾಗಿದೆ. ಈ ನಿರ್ಧಾರದಿಂದ ಚಿತ್ರವನ್ನು ಹೆಚ್ಚು ಜನರಿಗೆ ತಲುಪಿಸುವುದಕ್ಕೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

