ಮರ್ರಾ: ಪಶ್ಚಿಮ ಸುಡಾನ್‌ನ ಮರ್ರಾ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ 1,000 ಮಂದಿ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂದು ಸುಡಾನ್ ಲಿಬರೇಶನ್ ಮೂವ್‌ಮೆಂಟ್/ಸೇನೆ ಮಾಹಿತಿ ಹಂಚಿಕೊಂಡಿದೆ.
ಆಗಸ್ಟ್ 31ರಿಂದ ಸುರಿದ ನಿರಂತರ ಹಾಗೂ ಭಾರೀ ಮಳೆಯ ಬೆನ್ನಲ್ಲೇ ಈ ಭೂಕುಸಿತ ಸಂಭವಿಸಿದೆ ಎಂದು ಅಬ್ದೆಲ್ವಾಹಿದ್ ಮೊಹಮ್ಮದ್ ನೂರ್ ನೇತೃತ್ವದ ಗುಂಪೊಂದು ಹೇಳಿಕೆಯಲ್ಲಿ ತಿಳಿಸಿದೆ.
ಪರ್ವತದ ತಪ್ಪಲಿನಲ್ಲಿ ಭೂಕುಸಿತ ಉಂಟಾಗಿದ್ದು, ಇಡೀ ಗ್ರಾಮವನ್ನೇ ನೆಲಸಮ ಮಾಡಿದೆ. ಇದೊಂದು ಹಳ್ಳಿಯಲ್ಲಿ 1000 ಜನರು ವಾಸವಿದ್ದರು ಎನ್ನಲಾಗಿದ್ದು, ಒಬ್ಬನನ್ನು ಬಿಟ್ಟು ಉಳಿದೆಲ್ಲರೂ ದುರಂತ ಅಂತ್ಯ ಕಂಡಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಸುಡಾನ್ ಸೇನೆ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳನಡುವೆ ಭೀಕರ ಅಂತರ್ಯುದ್ಧ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಸ್ಥಳೀಯ ಜನರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ನಿರಾಶ್ರಿತರಾಗಿ ಮರ್ರಾ ಪರ್ವತ ಪ್ರದೇಶಗಳಿಗೆ ವಲಸೆ ಬಂದಿದ್ದರು. ಆಹಾರ ಮತ್ತು ಔಷಧದ ಕೊರತೆಯಿಂದ ಬಳಲುತ್ತಿದ್ದರು. ಈಗ ಅವರೂ ಸಹ ಈ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.

