ನವದೆಹಲಿ, ಮಾರ್ಚ್ 11: ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗದೆ ಜೀವಂತ ಶವದಂತಾಗಿದ್ದ ಹರೀಶ್ ರಾಣಾ ಕುರಿತು ಅವರ ವೃದ್ಧ ಪೋಷಕರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮಗನ ಚೇತರಿಕೆ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿದ್ದ ಮನವಿಗೆ ನ್ಯಾಯಾಲಯ ಅಂತಿಮವಾಗಿ ಒಪ್ಪಿಗೆ ಸೂಚಿಸಿದೆ.
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ಹರೀಶ್ ರಾಣಾ, 2013ರ ಆಗಸ್ಟ್ 20ರಂದು ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಈ ಅಪಘಾತದ ಬಳಿಕ ಅವರು ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗಿ ಕೋಮಾ ಸ್ಥಿತಿಯಲ್ಲೇ ಉಳಿದಿದ್ದರು. ಅಂದಿನಿಂದ ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಹಾಗೂ ಆಹಾರಕ್ಕಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅವಲಂಬಿಸಿಕೊಂಡು ಬದುಕುತ್ತಿದ್ದಾರೆ.
ಮಗನ ಚಿಕಿತ್ಸೆಗೆ ತಮ್ಮ ದೆಹಲಿಯ ಮನೆಯನ್ನು ಮಾರಿದ ಪೋಷಕರು ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡು ಏಮ್ಸ್ ಆಸ್ಪತ್ರೆಯಲ್ಲಿ ವರ್ಷಗಳ ಕಾಲ ಅವರ ಪಕ್ಕದಲ್ಲೇ ಇದ್ದರು. ಆದರೆ ವೈದ್ಯಕೀಯ ಮೌಲ್ಯಮಾಪನದಲ್ಲಿ ಚೇತರಿಕೆ ಸಾಧ್ಯತೆ ಇಲ್ಲವೆಂದು ಸ್ಪಷ್ಟವಾದ ಹಿನ್ನೆಲೆಯಲ್ಲಿ ದಯಾಮರಣಕ್ಕೆ ಕಾನೂನು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ಏಮ್ಸ್ ಆಸ್ಪತ್ರೆ ಸಲ್ಲಿಸಿದ ವೈದ್ಯಕೀಯ ವರದಿ ಆಧರಿಸಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರು, “ಇದು ಅತ್ಯಂತ ದುಃಖಕರ ಪರಿಸ್ಥಿತಿ. ಇಂತಹ ಯಾತನೆಯಲ್ಲಿ ಈ ಯುವಕನನ್ನು ಇನ್ನಷ್ಟು ದಿನ ಇರಲು ಬಿಡಲಾಗದು” ಎಂದು ಹೇಳಿ ದಯಾಮರಣಕ್ಕೆ ಅನುಮತಿ ನೀಡಿದರು.
ಭಾರತದಲ್ಲಿ ದಯಾಮರಣಕ್ಕೆ ಮೊದಲ ಬಾರಿ 2011ರಲ್ಲಿ ಅರುಣಾ ಶಾನ್‌ಬಾಗ್ ಪ್ರಕರಣದಲ್ಲಿ ಮಾನ್ಯತೆ ಸಿಕ್ಕಿದ್ದು, ನಂತರ 2018ರಲ್ಲಿ ಕಾಮನ್ ಕಾಸ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ತೀರ್ಪಿನ ಮೂಲಕ ಕಾನೂನುಬದ್ಧಗೊಳಿಸಲಾಗಿದೆ.

