ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಮೃತಪಟ್ಟಿದ್ದಾಳೆ. ಬೆಂಗಳೂರು ಉತ್ತರ ತಾಲೂಕಿನ ಉತ್ತನಹಳ್ಳಿ ಬಳಿ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗೆ ಮೂಲದ ದುರ್ಗಮ್ಮ ಮೃತ ದುರ್ದೈವಿ. ಪ್ರೀತಿಸಿ ಮದುವೆಯಾದ ಪತಿಯಿಂದಲೆ ಪತ್ನಿಯ ಕೊಲೆಯಾಗಿದೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ದುರ್ಗಮ್ಮ ಮಾರುತಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಪೋಷಕರ ವಿರೋಧದ ನಡುವೆ ಮದುವೆಯಾಗಿ ನಂತರ ಎರಡು ಕುಟುಂಬಗಳು ಒಂದಾಗಿದ್ದರು. ಮದುವೆ ನಂತರ ಕೂಡ್ಲಗಿಯಿಂದ ಬೆಂಗಳೂರಿಗೆ ಬಂದಿದ್ದ ದಂಪತಿ ಚಿಕ್ಕಜಾಲದ ಉತ್ತನಹಳ್ಳಿ ಬಳಿ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು.
ಆದರೆ ಇತ್ತೀಚಿಗೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಮಾರುತಿ ಹೊಡೆದು ಕಿರುಕುಳ ನೀಡುತ್ತಿದ್ದ. ಕಳೆದ ಒಂದು ತಿಂಗಳ ಹಿಂದೆಯೂ ಗಲಾಟೆ ಮಾಡಿಕೊಂಡು ದುರ್ಗಮ್ಮ ಊರಿಗೆ ಹೋಗಿದ್ದಳು. ಆದರೆ 15 ದಿನಗಳ ಹಿಂದೆ ಪತ್ನಿಯ ಮನವೊಲಿಸಿ ಮಾರುತಿ ಬೆಂಗಳೂರಿಗೆ ಕರೆತಂದಿದ್ದ. ಇದೀಗ ದುರ್ಗಮ್ಮ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

