ಬೇಸಿಗೆ ಸುಡು ಬಿಸಿಲಿನಿಂದ ಬೆವರಿದ್ದ ಜನರಿಗೆ ವರುಣರಾಯ ಸದ್ಯ ಕೂಲ್ ಕೂಲ್ ಮಾಡಿದ್ದಾನೆ. ಸೆಕೆಯಿಂದ ಬೇಸತ್ತಿದ್ದ ಜನರಿಗೆ ಮಳೆ ಹನಿಗಳು ಏನೋ ಒಂದು ರೀತಿ ಖುಷಿ ನೀಡಿವೆ. ಆಹ್ಹಾ.. ವಾತಾವರಣ ಎಂದರೆ ಹೀಗೆ ಇರಬೇಕು. ಬಿಸಿಲು ಬೇಡವೇ ಬೇಡಪ್ಪಾ ಎಂದು ಎಷ್ಟೋ ಜನರು ಮನದಲ್ಲೇ ಪಿಸುಗುಟ್ಟಿದ್ದಾರೆ. ಸದ್ಯ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದರಿಂದ ನಮ್ಮ.. ನಮ್ಮ ಆರೋಗ್ಯ ಕಡೆ ಗಮನ ಹರಿಸಬೇಕು. ಏಕೆಂದರೆ ಮಳೆಯಿಂದಲೂ ನಮಗೆ ಹಲವು ರೋಗ-ರುಜಿನುಗಳು ಬರುವ ಸಾಧ್ಯತೆ ಇದೆ.

ಮಳೆಗಾಲದಲ್ಲಿ ಮಳೆ ನೀರು ನಿಂತು ಅಲ್ಲಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳು ನಮಗೆ ಕಚ್ಚುವುದರಿಂದ ಡೆಂಘೀ, ಮಲೇರಿಯಾದಂತಹ ಜ್ವರಗಳು ನಮ್ಮನ್ನ ಕಾಡಲಿತ್ತಾವೆ. ಹೀಗಾಗಿ, ಮನೆಯ ಸುತ್ತಮುತ್ತ ಮಳೆನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯೊಳಗೆ ಸೊಳ್ಳೆ ಪರದೆಗಳನ್ನು ಬಳಸುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಪ್ರತಿ ವರ್ಷವು ಇದರಿಂದ ಪಾರಾಗಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಸದ್ಯ ಎಲ್ಲೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ರಸ್ತೆ ಬದಿ, ಹೋಟೆಲ್ ಅಥವಾ ಹೊರಗಿನ ಆಹಾರವನ್ನು ತಿನ್ನುವುದು ನಿಲ್ಲಿಸಿಬಿಡಿ. ಮಳೆಗಾಲದಲ್ಲಿ ಹೊರಗಿನ ಆಹಾರ-ತಿಂಡಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಲ್ಲದೇ ಪ್ರಕೃತಿಗೆ ಹೊಸದಾಗಿ ನೀರು ಸೇರಿಕೊಳ್ಳುವುದರಿಂದ ಕೆಮ್ಮು, ನೆಗಡಿ, ಶೀತದಂತ ಕಾಯಿಲೆಗಳು ಬೇಗ ಬಂದು ಬಿಡ್ತಾವೆ. ಹೊರಗಿನ ಆಹಾರ ಪದಾರ್ಥಗಳು ನಮಗೆ ರೋಗನಿರೋಧಕವಾಗಿ ವರ್ತಿಸುವುದಕ್ಕಿಂತ ಹೆಚ್ಚಿನ ಬ್ಯಾಕ್ಟೀರಿಯಾ ಉತ್ಪತ್ತಿ ಮಾಡಿ ಅನಾರೋಗ್ಯಕ್ಕೆ ಕಾರಣವಾಗ್ತಾವೆ.

ಮಳೆಗಾಲದಲ್ಲಿ ಮನೆಗೆ ತರುವಂತ ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆಯಬೇಕು. ಹೊರಗೆ ತಂಪಾದ ವಾತಾವರಣ ಇರುವುದರಿಂದ ಬ್ಯಾಕ್ಟೀರಿಯಾಗಳು ಬೇಗ ನಾಶವಾಗುವುದಿಲ್ಲ. ಹೀಗಾಗಿ ಹಣ್ಣು, ತರಕಾರಿಗಳನ್ನ ತೊಳೆದು ತಿನ್ನುವುದು ಉತ್ತಮ. ಇದರಿಂದ ಬರುವ ತ್ಯಾಜ್ಯವನ್ನು ಬೇಗ ಎಸೆದುಬಿಡಿ. ಏಕೆಂದರೆ ಸೊಳ್ಳೆಯಂತಹ ಸೂಕ್ಷ್ಮ ಕೀಟಗಳು ಉತ್ಪಾತ್ತಿ ಆಗಿ ಮನೆಯಲ್ಲಿಟ್ಟಿರುವ ಆಹಾರದ ಮೇಲೆ ಕುಳಿತು ಬಿಡುತ್ತಾವೆ. ಅಡುಗೆಗೆ ತರುವ ಸೊಪ್ಪನ್ನು ಸರಿಯಾಗಿ ತೊಳೆದು ಬೇಯಿಸಿ ತಿನ್ನುವುದು ಉತ್ತಮ.

ಯಾವುದೇ ನಗರ ಬಹುತೇಕ ಮಾಲಿನ್ಯಕಾರಕ ಕಣಗಳಿಂದ ತುಂಬಿವೆ. ಹೀಗಾಗಿ ಮಳೆಯಲ್ಲಿ ನೆನೆದು ಬಂದಾಗ ಮನೆಯಲ್ಲಿನ ನೀರಿನಿಂದ ಸ್ನಾನ ಮಾಡಿ. ನೆನೆದು ಬಂದ ಬಟ್ಟೆಯಲ್ಲೇ ಇರಬೇಡಿ. ಒದ್ದೆ ಬಟ್ಟೆಯಲ್ಲೇ ಇದ್ದರೇ ಸೋಂಕು ತಗುಲಬಹುದು. ಕೂದಲಗಳನ್ನು ಒಣಗಿಸಿ ಕೊಠಡಿಯ ಬೆಚ್ಚಗಿನ ಸ್ಥಳದಲ್ಲಿ ಕುಳಿತು ಬಿಸಿಯಾದ ಪಾನೀಯಾ, ತಿಂಡಿಯಂತಹದ್ದನ್ನ ಏನಾದರೂ ಸೇವಿಸಿ.

ಮಳೆಗಾಲ ಆಗಿದ್ದರಿಂದ ಜನರು ನೀರು ಕುಡಿಯುವುದು ತುಂಬಾ ಕಡಿಮೆ ಮಾಡುತ್ತಾರೆ. ಇದು ಆನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಮಳೆಗಾಲವಾದರೂ ಈ ಹಿಂದಿನಂತೆ ಹೆಚ್ಚಿನ ಮಟ್ಟದಲ್ಲಿ ನೀರನ್ನು ಕುಡಿಯುವುದನ್ನ ಮುಂದುವರೆಸಿ. ಇದು ದೇಹವನ್ನು ಸಮತೋಲನದಲ್ಲಿ ಇಡಲು ಸಹಕಾರಿ ಆಗುತ್ತದೆ. ವಿಟಮಿನ್ ಸಿ ಅಂಶವಿರುವ ಆಹಾರಗಳನ್ನ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ನಿಂಬೆಹಣ್ಣಿನ ಶರಬತ್ತು, ಬಾಳೆಹಣ್ಣು, ಬಿಟ್ರೂಟ್ನಂತ ಹಣ್ಣು, ತರಕಾರಿ ಸೇವಿಸಿ. ಹೆಚ್ಚು ಕೊಬ್ಬಿನಾಂಶವಿರುವ ಜಂಕ್ ಫುಡ್ಗಳನ್ನ ತೆಗೆದುಕೊಳ್ಳಬೇಡಿ.

ಶೀತ, ನೆಗಡಿ, ಕೆಮ್ಮು ಅಂತ ವೈರಲ್ ಫೀವರ್ ಕಾಣಿಸಿಕೊಂಡರೇ ತಕ್ಷಣ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಇವು ದೀರ್ಘವಾಗಿ ಇದ್ದರೇ ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಬೇಗ ಹರಡಿ ಅನಾರೋಗ್ಯಕ್ಕೆ ಕಾರಣವಾಗುತ್ತಾವೆ. ಮಳೆ ಎಂದರೆ ಖುಷಿ ಪಡೋ ವಿಚಾರವೇ ಆಗಿದೆ. ಇದರ ಜೊತೆಗೆ ನಮ್ಮ ಆರೋಗ್ಯವೂ ಮುಖ್ಯ ಎನ್ನುವುದು ಮರೆಯಬೇಡಿ.