ಚೆನ್ನೈ: ಕಾಲಿವುಡ್ ನಟ ವಿಶಾಲ್ (Actor Vishal) ಭಾನುವಾರ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶಾಲ್, ವೇದಿಕೆ ಮೇಲೆಯೇ ಮತ್ತೊಮ್ಮೆ ಅಸ್ವಸ್ಥರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಟ್ರಾನ್ಸ್‌ಜೆಂಡರ್ ಬ್ಯೂಟಿ ಕಂಟೆಸ್ಟ್‌ಗೆ ಅತಿಥಿಯಾಗಿ ತೆರಳಿದ್ದ ತಮಿಳು ನಟ ವಿಶಾಲ್ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ.
ವಿಲ್ಲುಪುರಂನ ಕೂವಾಗಮ್ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ಕಳೆದ ಕೆಲವು ದಿನಗಳಿಂದ ಚಿತ್ತಿರೈ (ತಮಿಳು ಮಾಸ) ಆಚರಣೆಗಳು ನಡೆಯುತ್ತಿವೆ. ವಿಶಾಲ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಭಾನುವಾರ (ಮೇ 11) ಆಯೋಜಕರು ಮಿಸ್ ಕೂವಾಗಮ್ ತೃತೀಯ ಲಿಂಗಿ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶಾಲ್ ಸ್ವಲ್ಪ ಸಮಯದ ನಂತರ ವೇದಿಕೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದರು. ಇದು ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಲು ಕಾರಣವಾಯಿತು. ಆದರೆ, ವಿಶಾಲ್ ಇತ್ತೀಚೆಗೆ ಮತ್ತೊಮ್ಮೆ ತೀವ್ರ ಅಸ್ವಸ್ಥರಾಗಿದ್ದಾರೆ.

