ಹೈದರಾಬಾದ್ : ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾರಿ ಮಳೆಗೆ ಜನರು ತತ್ತರಿಸಿದ್ದು, ಉಭಯ ರಾಜ್ಯಗಳಲ್ಲಿ ಒಟ್ಟು 29 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತಪಟ್ಟ 19 ಜನರಲ್ಲಿ ಒಂಬತ್ತು ಮಂದಿ ಆಂಧ್ರಪ್ರದೇಶದವರಾಗಿದ್ದರೆ, ತೆಲಂಗಾಣದಲ್ಲಿ 10 ಸಾವುಗಳು ಸಂಭವಿಸಿವೆ.
ಭಾರಿ ಮಳೆಯಿಂದ ಲಕ್ಷಾಂತರ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದು, ಮಳೆಯಿಂದಾಗಿ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಇನ್ನು ನದಿಗಳು ಉಕ್ಕಿ ಹರಿಯುತ್ತಿದ್ದು, ಸಾವಿರಾರು ಜನರನ್ನು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಪ್ರವಾಹ ಪೀಡಿತ ಪ್ರದೇಶಗಳಿಂದ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರದಿಂದ ಪಡೆಯಬಹುದಾದ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.
ಶಾಲೆಗಳಿಗೆ ರಜೆ : ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಆಂಧ್ರಪ್ರದೇಶದಲ್ಲಿ 17,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ತೀವ್ರ ಪ್ರವಾಹವನ್ನು ಅನುಭವಿಸಿದ ವಿಜಯವಾಡ ಒಂದರಲ್ಲೇ 2.76 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಹೈದರಾಬಾದ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತವಾಗಿದೆ. ಹೈದರಾಬಾದ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಗಳು ಪ್ರವಾಹದಲ್ಲಿ ಮುಳುಗಿದ್ದರಿಂದ ಎರಡೂ ರಾಜ್ಯಗಳ ಹಲವಾರು ಪ್ರದೇಶಗಳು ಸಂಪರ್ಕ ಕಡಿತಗೊಂಡಿವೆ. ಪ್ರವಾಹದಿಂದಾಗಿ ಆಂಧ್ರ-ತೆಲಂಗಾಣ ಗಡಿಯಲ್ಲಿ ಸೇತುವೆಗೆ ಹಾನಿಯಾಗಿದ್ದು, ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸಂಚಾರವೂ ಅಸ್ತವ್ಯಸ್ತವಾಗಿದೆ.
ರೈಲು ಸಂಚಾರ ಬಂದ್ :
ಹೈದರಾಬಾದ್- ವಿಜಯವಾಡ ನಡುವೆ ರೈಲು ಸಂಚಾರ ಬಂದ್ ಆಗಿದೆ. 80ಕ್ಕೂ ಹೆಚ್ಚು ರೈಲುಗಳು ಹಾಗೂ 500 ಕ್ಕೂ ಹೆಚ್ಚು ಬಸ್ ಗಳ ಸಂಚಾರವನ್ನ ಬಂದ್ ಮಾಡಲಾಗಿದೆ.

