ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ವಾಸವಿರುವ ಅವರ ಬೆಂಗಳೂರಿನ ಮನೆಯಲ್ಲಿ ಕಳ್ಳತನ ನಡೆದಿದೆ.
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಈ ಕಳ್ಳತನ ಸಂಭವಿಸಿದ್ದು, 3 ಲಕ್ಷ ರೂಪಾಯಿ ಹಣ ಕಳುವಾಗಿದೆ. ಈ ಘಟನೆಯು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.
ಕಳ್ಳತನದ ಘಟನೆ ಸೆಪ್ಟೆಂಬರ್ 4 ರಿಂದ 8ರ ನಡುವಿನ ಅವಧಿಯಲ್ಲಿ ನಡೆದಿದೆ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ. ಅವರು ತಮ್ಮ ಮ್ಯಾನೇಜರ್ ನಾಗರಾಜ್‌ಗೆ ಮನೆಯ ಬೆಡ್‌ರೂಂನ ವಾರ್ಡ್‌ರೋಬ್‌ನಲ್ಲಿ 3 ಲಕ್ಷ ರೂಪಾಯಿ ಇಡುವಂತೆ ಸೂಚಿಸಿದ್ದರು. ಆ ಸಂದರ್ಭದಲ್ಲಿ ವಿಜಯಲಕ್ಷ್ಮೀ ಅವರು ಮೈಸೂರಿಗೆ ತೆರಳಿದ್ದರು. ಸೆಪ್ಟೆಂಬರ್ 8 ರಂದು ಮರಳಿ ಬಂದು ಪರಿಶೀಲಿಸಿದಾಗ ಹಣ ಕಾಣೆಯಾಗಿರುವುದು ಗೊತ್ತಾಗಿದೆ. ಮನೆಯಲ್ಲಿ ಕೆಲಸ ಮಾಡುವವರನ್ನು ವಿಚಾರಿಸಿದರೂ, ಯಾರೂ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಕಾರಣಕ್ಕೆ ವಿಜಯಲಕ್ಷ್ಮೀ ಅವರ ಮ್ಯಾನೇಜರ್ ನಾಗರಾಜ್, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿಜಯಲಕ್ಷ್ಮೀ ಅವರು ಈ ಕಳ್ಳತನದ ಬಗ್ಗೆ ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ದೂರಿನಲ್ಲಿ ಮನೆ ಕೆಲಸದವರ ವಿರುದ್ಧ ಆರೋಪ ಮಾಡಲಾಗಿದ್ದು, ಪೊಲೀಸರು ಈ ದಿಶೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.

