ನವದೆಹಲಿ: ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ ಇಲ್ಲ. ಬದಲಾಗಿ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ ಆಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನವೆಂಬರ್ ಕ್ರಾಂತಿ ಕುರಿತು ದೆಹಲಿಯಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಆಗುತ್ತೆ ಅಂತಾ ಸಿಎಂ ಸಿದ್ದರಾಮಯ್ಯ ಅಥವಾ ನಾನು ಹೇಳಿದ್ದೀವಾ ಎಂದು ಪ್ರಶ್ನಿಸಿದ್ದಾರೆ.
5 ವರ್ಷ, 10 ವರ್ಷ, 15 ವರ್ಷ ಆಗಲಿ. ನಾಯಕತ್ವ ಬಗ್ಗೆ ಹೈಕಮಾಂಡ್ ಹೇಗೆ ಹೇಳುತ್ತೆ ಹಾಗೆ ನಾವು ನಡೆದುಕೊಳ್ಳುತ್ತೇವೆ. ಪಕ್ಷದ ಚೌಕಟ್ಟು ಬಿಟ್ಟು ನಾನು ಎಂದೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತೇನೆ. ಸಚಿವ ಸಂಪುಟ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಮೇಜರ್ ಸರ್ಜರಿಗೆ ‘ಹೈ’ ‘ಕೈ’!
ನವೆಂಬರ್ ಕ್ರಾಂತಿ ಚರ್ಚೆ ನಡುವೆ ಕರ್ನಾಟಕ ಕಾಂಗ್ರೆಸ್ನಲ್ಲಿ ಸದ್ದಿಲ್ಲದೇ ಮಹತ್ವ ಬೆಳವಣಿಗೆ ನಡೆಯುತ್ತಿವೆ. ಡಿಸಿಎಂ ಡಿಕೆ ಶಿವಕುಮಾರ್ ಬಣ ನಾಯಕತ್ವ ಬದಲಾವಣೆ ಧ್ವನಿ ಎತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ದಾಳ ಉರುಳಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹೈಕಮಾಂಡ್ ಪ್ರವೇಶ ಮಾಡಿದ್ದು, ರಾಜ್ಯದಲ್ಲಾಗುತ್ತಿರುವ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಹೌದು….ಸಂಪುಟ ಪುನಾರಚನೆ ಹಾಗೂ ಸಿಎಂ ಬದಲಾವಣೆ ಮಾಡಿದರೆ ಏನೆಲ್ಲಾ ಆಗಬಹುದು ಎನ್ನುವ ಸಾಧಕ ಬಾಧಕಗಳನ್ನು ಬಗ್ಗೆ ಹೈಕಮಾಂಡ್ ಗುಪ್ತವಾಗಿಯೇ ಮಾಹಿತಿ ಸಂಗ್ರಹಿಸಿದೆ.

