ಬೆಂಗಳೂರು: ಬೆಂಗಳೂರಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಹೊಸ ಮಾದರಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಈಗ ಆನ್‌ಲೈನ್ ಡೆಲಿವರಿ ಮಾಡುವವರನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಸಮಯ ಸಾಧಿಸಿ ಡೆಲಿವರಿಗೆ ತಂದ ಐಟಂ ಗಳನ್ನೂ ದೋಚುತ್ತಿದ್ದಾರೆ.
ಡೆಲಿವರಿ ನೀಡುವ ಭರದಲ್ಲಿ ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿದರೆ ಕ್ಷಣ ಮಾತ್ರದಲ್ಲಿ ಬ್ಯಾಗ್ ಮಾಯವಾಗುತ್ತದೆ. ವೈಟ್ ಫೀಲ್ಡ್ ಭಾಗದಲ್ಲಿ ಆ. 1ರಂದು ರಸ್ತೆ ಪಕ್ಕ ನಿಂತಿದ್ದ ಡೆಲಿವರಿ ಬಾಯ್ ಬೈಕ್‌ನಲ್ಲಿದ್ದ ಬ್ಯಾಗ್ ಅನ್ನು ಖದೀಮರು ಹಾಡಹಗಲೇ ಎಗರಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿ ಸಾರ್ವಜನಿಕರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಅಮೇಜಾನ್, ಪ್ಲಿಫ್‌ಕಾರ್ಟ್ ಡೆಲಿವರಿ ಬಾಯ್‌ಗಳೇ ಇವರ ಮುಖ್ಯ ಟಾರ್ಗೆಟ್. ಆನ್‌ಲೈನ್ ಡೆಲಿವರಿ ಬಾಯ್‌ಗಳನ್ನು ಟಾರ್ಗೆಟ್ ಮಾಡುವ ಖತರ್ನಾಕ್ ಗ್ಯಾಂಗ್ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಕ್ಷಣಮಾತ್ರದಲ್ಲಿ ಬ್ಯಾಗ್ ಅಪಹರಿಸಿ ಮಾಯವಾಗುತ್ತದೆ. ಪ್ರಾಡಕ್ಟ್ ಡೆಲಿವರಿ ಮಾಡಿ ಬರುವಷ್ಟರಲ್ಲಿ ಬೈಕ್‌ನಲ್ಲಿದ್ದ ಬ್ಯಾಗ್ ಜತೆ ಪರಾರಿ ಆಗುತ್ತದೆ.
ಕಳೆದ ಮೂರ್ನಾಲ್ಕು ದಿನಗಳಲ್ಲಿ ವೈಟ್ ಫೀಲ್ಡ್, ಮಹದೇವಪುರ ಸೇರಿ ಮೂರು ಕಡೆ ಇದೇ ರೀತಿ ಕೈ ಚಳಕ ತೋರಿಸಿರುವ ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊಗಳನ್ನು ಹರಿಯಬಿಟ್ಟು ಎಚ್ಚರದಿಂದಿರುವಂತೆ ಹಲವರು ಮನವಿ ಮಾಡಿದ್ದಾರೆ. ಹೀಗಾಗಿ ಆಲ್‌ಲೈನ್ ಡೆಲಿವರಿ ಮಾಡುವವರು ಎಚ್ಚರಿಕೆವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ