ತಿರುಪತಿ: ತಿರುಪತಿ ದೇವಸ್ಥಾನದಲ್ಲಿ ನೀಡು ಲಡ್ಡು ಪ್ರಸಾದದಲ್ಲಿ ಹಂದಿ ಮತ್ತು ದನದ ಕೊಬ್ಬು ಬಳಕೆ ಮಾಡಿರುವುದು ಲಾಬ್ ರಿಪೋರ್ಟ್ ನಿಂದ ದೃಢಪಟ್ಟಿದೆ ಎಂದು ಆಡಳಿತರೂಢ ಟಿಡಿಪಿ ಆರೋಪಿಸಿದೆ. ಸ್ವತಃ ಆಂಧ್ರ ಪ್ರದೇಶ ಮುಖ್ಯಮಂತ್ರಿ ಆರೋಪಿಸಿದ ಬೆನ್ನಲ್ಲೇ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.
ತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದನ್ನು ಗುಜರಾತ್ ಮೂಲದ ಜಾನುವಾರು ಪ್ರಯೋಗಾಲಯ, NDDB CALF Ltd ದೃಢಪಡಿಸಿದೆ ಎಂದು ಆಡಳಿತಾರೂಢ ತೆಲುಗು ದೇಶಂ ಪಕ್ಷ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಯೋಗಾಲಯದ ವರದಿಯನ್ನು ಪ್ರದರ್ಶಿಸಿದ ಟಿಡಿಪಿ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಅವರು, ತಿರುಪತಿಯ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಇರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಇದರಲ್ಲಿ ಹಂದಿಯ ಕೊಬ್ಬು, ದನದ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆ ಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟದ ತುಪ್ಪ ಬಳಕೆ ಮಾಡಲಾಗುತ್ತಿದೆ ಎಂದು ಖಚಿತವಾಗಿದೆ ಎಂದರು.
ಜಗನ್ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು :
ಖ್ಯಾತ ವಕೀಲ ವಿನೀತ್ ಜಿಂದಾಲ್ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ. ತಿರುಮಲ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಬಳಸಿ ಜಗನ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ವೈಸಿಪಿ ಮುಖ್ಯಸ್ಥರು ತಮ್ಮ ಕೃತ್ಯಗಳಿಂದ ಹಿಂದೂಗಳ ಆತ್ಮವನ್ನು ಕೊಂದಿದ್ದಾರೆ ಮತ್ತು ಅವರ ನಂಬಿಕೆ, ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿದ್ದು, ಕೇಂದ್ರ ಗೃಹ ಸಚಿವಾಲಯ ಹಾಗೂ ಆಂಧ್ರ ಮತ್ತು ಉತ್ತರ ಪ್ರದೇಶದ ಡಿಜಿಪಿಗಳಿಗೆ ದೂರು ನೀಡಿದ್ದಾರೆ.
ಪ್ರಾಣಿ ಕೊಬ್ಬಿನ ತುಪ್ಪ ಪೂರೈಸಿದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವೈಸಿಪಿ ಮುಖ್ಯಸ್ಥ ಜಗನ್ ಹಾಗೂ ಅಂದಿನ ಟಿಟಿಡಿ ಆಡಳಿತ ವರ್ಗಕ್ಕೆ ಮನವಿ ಮಾಡಿದ್ದರೂ, ಜಗನ್ ಉದ್ದೇಶಪೂರ್ವಕವಾಗಿ ಇಂತಹ ಕೃತ್ಯಗಳನ್ನು ಎಸಗಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕೆ ಕಾರಣರಾದ ಪ್ರತಿಯೊಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 152, 192, 196, 298 ಮತ್ತು 353 ರ ಅಡಿಯಲ್ಲಿ ತಕ್ಷಣವೇ ಪ್ರಕರಣ ದಾಖಲಿಸಬೇಕು ಎಂದು ಅವರು ವಿನಂತಿಸಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯೂ ಕ್ರಮ ಕೈಗೊಳ್ಳುವಂತೆ ವಕೀಲ ವಿನೀತ್ ಜಿಂದಾಲ್ ಮನವಿ ಮಾಡಿದ್ದಾರೆ.
ಜಗನ್ ಮೋಹನ್ ರೆಡ್ಡಿ ಮಾನಹಾನಿ ಆರೋಪ :
ಲಡ್ಡು ಪ್ರಸಾದ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದು ಲಡ್ಡು ಪ್ರಕರಣದಲ್ಲಿ ವೈಎಸ್‌ಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಾನಹಾನಿಯಾಗುತ್ತಿದೆ ಎಂದು ಆರೋಪಿಸಿ ಆಂಧ್ರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನವೋಲು ಸುಧಾಕರ್ ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಲಡ್ಡು ಪ್ರಸಾದ ತಯಾರಿಸಲು ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎಂದು ಆರೋಪಿಸಿ ವೈ.ಎಸ್. ಜಗನ್ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಅವರು ಹೈಕೋರ್ಟ್‌ಗೆ ಮನವಿ ಮಾಡಿದರು.
ಈ ಕುರಿತು ಕೂಡಲೇ ಸಮಿತಿ ರಚಿಸಿ ತನಿಖೆ ನಡೆಸುವಂತೆ ಪೀಠವನ್ನು ಸುಧಾಕರ್ ರೆಡ್ಡಿ ಕೋರಿದರು. ಆದರೆ, ಹೈಕೋರ್ಟ್ ಪ್ರತಿಕ್ರಿಯಿಸಿ, ಈಗ ತುರ್ತು ವಿಚಾರಣೆ ನಡೆಸುವ ಅಗತ್ಯವಿಲ್ಲ, ಮುಂದಿನ ಬುಧವಾರ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

