1.ಪಾಕಿಸ್ತಾನ ವಿರುದ್ಧದ ‘ಆಪರೇಷನ್ ಸಿಂಧೂರ’ ಯಶಸ್ಸು ಕಂಡ ಹಿನ್ನೆಲೆ
ಪಾಕಿಸ್ತಾನ ವಿರುದ್ಧದ ‘ಆಪರೇಷನ್ ಸಿಂಧೂರ’ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮೇ 15 ರಿಂದ 20 ರವೆರೆಗೆ ಜಿಲ್ಲಾ ಕೇಂದ್ರ, ಮಂಡಲ ಕೇಂದ್ರಗಳಲ್ಲಿ ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ , ತಿರಂಗಾ ಯಾತ್ರೆ ಸಂಪೂರ್ಣ ಪಕ್ಷಾತೀತವಾಗಿರಲಿ ಎಂಬ ಕಾರಣಕ್ಕೆ ಪಕ್ಷ ಚಿಹ್ನೆ, ಪಕ್ಷದ ಬಾವುಟಗಳನ್ನು ಬಳಸುತ್ತಿಲ್ಲ. ಮೇ 15,16,17 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 18,19,20ರಂದು ಎಲ್ಲ ಮಂಡಲ ಕೇಂದ್ರಗಳಲ್ಲಿ ಯಾತ್ರೆ ನಡೆಯಲಿದೆ. ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ತಿಳಿಸಿದರು.
2.ಯಾರಿಗೂ ಯಾರನ್ನೂ ಕೊಲ್ಲುವ ಹಕ್ಕಿಲ್ಲ : ಯು.ಟಿ ಖಾದರ್
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಪ್ರಾಧಿಕಾರಕ್ಕೆ (ಎನ್‌ಐಎ) ಹಸ್ತಾಂತರಿಸಬೇಕೆ ಅಥವಾ ಬೇಡವೇ ಎಂಬುದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು, ಯಾವುದೇ ತನಿಖೆಗೆ ತಮ್ಮ ಆಕ್ಷೇಪವಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
3.ಮೇ 15ರಿಂದ ಗ್ರೇಟರ್ ಬೆಂಗಳೂರು ಜಾರಿ; ಸದ್ಯಕ್ಕಿಲ್ಲ ಚುನಾವಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇ 15ರಿಂದ ಅಸ್ತಿತ್ವ ಕಳೆದುಕೊಳ್ಳಲಿದ್ದು, ‘ಗ್ರೇಟರ್ ಬೆಂಗಳೂರು ಪ್ರದೇಶ’ ಎಂದು ಬದಲಾಗಲಿದೆ. ಮೇ 15 ರಂದು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದರಿಂದ, ಅದು ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಲಿದೆ.
4.ಟ್ಯಾಂಕರ್ ನೀರಿನ ಮಾಫಿಯಾ ತಡೆಯಲು ಸಂಚಾರಿ ಕಾವೇರಿ ಯೋಜನೆ
ಬೆಂಗಳೂರಿನಲ್ಲಿ ಟ್ಯಾಂಕರ್ ನೀರು ಪೂರೈಕೆ ದೊಡ್ಡ ಮಾಫಿಯಾವಾಗಿದೆ. ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
5.ಸ್ಯಾಂಡಲ್ವುಡ್ಗೆ ರಿಯಲ್ ಸ್ಟಾರ್ ಉಪ್ಪಿ ಮಗ ಆಯುಷ್ ಎಂಟ್ರಿ
ಉಪೇಂದ್ರರ ಪುತ್ರ ಆಯುಷ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಮೊದಲ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಂತ್ರಾಲಯದಲ್ಲಿ ನಡೆದಿದ್ದು ಪುರುಷೋತ್ತಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವೇಣು ಗೋಪಾಲ್ ಛಾಯಾಗ್ರಹಣ ಮಾಡಲಿದ್ದಾರೆ. ಆಯುಷ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ಮತ್ತು ಫಿಟ್‌ನೆಸ್ ಮೇಲೆ ಗಮನ ಹರಿಸಿದ್ದಾರೆ.
6.ಕಾಲು ಜಾರಿ ಚರಂಡಿಯಲ್ಲಿ ಬಿದ್ದ ಕಾಶಪ್ಪ ಶಿರಟ್ಟಿ
ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಧಾರಾಕಾರ ಸುರಿದ ಮಳೆಯಿಂದ ಚರಂಡಿಯೊಳಗೆ 52 ವರ್ಷದ ಕಾಶಪ್ಪ ಶಿರಟ್ಟಿ ಎನ್ನುವವರು ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ. ಇನ್ನು ಪೊಲಿಸ್ ಇಲಾಖೆ ಮತ್ತು ನಗರಸಭೆ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದು ಜೆಸಿಬಿಯಿಂದ ಪುಟಪಾತ್ ತೆರವುಗೊಳಿಸುತ್ತಿದ್ದಾರೆ.
7.ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿಯ ಶವ ಪತ್ತೆ
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಸಂಪತ್ ಎಂಬಾತನ ಮೃತದೇಹ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಪತ್ತೆಯಾಗಿದೆ.ಕೊಲೆ ಮಾಡಿ ಕಾರಲ್ಲಿ ತಂದು ಪ್ರಪಾತದಲ್ಲಿ ಎಸೆದಿರುವ ಶಂಕೆ ಇದೆ. ಏಪ್ರಿಲ್ 9 ರಂದು ಕುಶಾಲನಗರದಿಂದ ಹಾಸನಕ್ಕೆ ಬಂದಿದ್ದ ಸಂಪತ್ ಏಪ್ರಿಲ್ 10 ರಂದು ಕಾಣೆಯಾಗಿದ್ದರು.ಈ ಘಟನೆಗೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದೆ.
8.ಇಹಲೋಕದ ಯಾತ್ರೆ ಮುಗಿಸಿದ ರಾಕೇಶ್: ಹುಟ್ಟೂರಲ್ಲಿ ಶೋಕಸಾಗರ
‘ಕಾಮಿಡಿ ಕಿಲಾಡಿ’ಯಾಗಿ ಕರುನಾಡಿನ ಮನಗೆದ್ದಿದ್ದ ರಾಕೇಶ್ ಪೂಜಾರಿ ಇನ್ನು ನೆನಪು ಮಾತ್ರ! ಬಾರದ ಊರಿಗೆ ಪಯಣಿಸಿರುವ ರಾಕಿ ಸ್ಮರಿಸಿ ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಕಳೆದ ಸಂಜೆ ಅಂತ್ಯಸಂಸ್ಕಾರ ನಡೆದಿದ್ದು, ಹುಟ್ಟೂರಿನಲ್ಲಿ ಶೋಕಸಾಗರ ಮುಗಿಲು ಮುಟ್ಟಿತ್ತು. ಕುಟುಂಬಸ್ಥರ, ಬಂಧುಮಿತ್ರರ ಆಕ್ರಂದನ ಕರುಳು ಕಿತ್ತು ಬರುವಂತಿತ್ತು.
9.ಪಹಲ್ಗಾಮ್ನಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಕ್ಕಿಲ್ಲ: ಸತೀಶ್ ಜಾರಕಿಹೊಳಿ
ಪಹಲ್ಗಾಮ್ನಲ್ಲಿ ಮೃತಪಟ್ಟ 26 ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ. ಅದಕ್ಕಾಗಿ ಮತ್ತೆ ಕಾಯಬೇಕಾಗುತ್ತದೆ. ಭಾರತ-ಪಾಕ್ ನಡುವೆ ಕದನ ವಿರಾಮದಿಂದಾಗಿ ಯುದ್ಧ ಸ್ಥಗಿತಗೊಂಡಿದೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡಬೇಕು” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
10.FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಗಾಯಕ ಸೋನು ನಿಗಮ್
ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಕನ್ನಡ ಹಾಡುಗಳನ್ನು ಹಾಡುವಂತೆ ಒತ್ತಾಯಿಸಿದ ಸಂದರ್ಭದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ ಗಾಯಕ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

