1.ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ ಖಡಕ್ ಎಚ್ಚರಿಕೆ
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟ ಘಟನೆಯಿಂದ ಕರ್ನಾಟಕಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯಿಸಿದ್ದು, ಪೊಲೀಸರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬೇಡಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
2.ರಾಜ್ಯದ ಎಲ್ಲಾ ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ
ಶಾಲಾ ಮಕ್ಕಳಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮು ಇದ್ದರೆ ಅಂತಹ ಮಗುವಿಗೆ ರಜೆ ಕೊಡಿ ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸೂಚನೆ ನೀಡಿದ್ದಾರೆ. ಪ್ರತಿ ವಾರ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಿ. ಕೋವಿಡ್ಗಾಗಿ ಒಂದು ಸಹಾಯವಾಣಿ ತೆರೆಯಿರಿ. ಕಳೆದ ಬಾರಿ ಕೋವಿಡ್ ಸಮಸ್ಯೆ ಆದ ರೀತಿ ಆಗಬಾರದು. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
3.ಮನೆ ಬಳಿ ಆಟವಾಡುತ್ತಿದ್ದಾಗಲೇ ಪ್ರಾಣಬಿಟ್ಟ ಬಾಲಕ
ಮಕ್ಕಳಿಂದ ಮನೆಯಲ್ಲಿ ಪೋಷಕರು ಎಷ್ಟು ಎಚ್ಚರದಿಂದ ಇದ್ದರು ಕಡಿಮೆನೇ. ಏಕೆಂದರೆ ಪೋಷಕರು ಎಷ್ಟೇ ಕೆಲಸದಲ್ಲಿ ಬ್ಯುಸಿಯಾಗಿದ್ದರು ಮಕ್ಕಳ ಬಗ್ಗೆ ಗಮನ ಹರಿಸಲೇಬೇಕು. ಇಲ್ಲವಾದರೇ ಮಕ್ಕಳಿಗೆ ಪ್ರಾಣಕ್ಕೆ ಆಪತ್ತು ಬರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ವಿದ್ಯುತ್ ಶಾಕ್ನಿಂದ ಬಾಲಕ ಬಲಿಯಾಗಿರೋ ಘಟನೆ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದಿದೆ
4.ರೈತರಿಗೆ ಸಿಹಿ ಸುದ್ದಿ: 20 ಸಾವಿರ ರೂ. ಗಡಿದಾಡಿದ ಒಣಕೊಬ್ಬರಿ ದರ
ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಒಣ ಕೊಬ್ಬರಿ ದರವು ಸೋಮವಾರ ಕ್ವಿಂಟಾಲ್‌ಗೆ ₹20,900ಕ್ಕೆ ತಲುಪಿದ್ದು, ತೆಂಗು ಬೆಳೆಗಾರರಲ್ಲಿ ಭರವಸೆ ಮತ್ತು ಸಂತಸ ಮೂಡಿಸಿದೆ. ಕಳೆದ ಕೆಲವು ವರ್ಷಗಳಿಂದ ಕೊಬ್ಬರಿ ದರದಲ್ಲಿ ಕಂಡುಬಂದ ಕುಸಿತವು ರೈತರಲ್ಲಿ ಆತಂಕವನ್ನು ಉಂಟುಮಾಡಿತ್ತು. ಆದರೆ ಇದೀಗ ದರದಲ್ಲಿ ಕ್ರಮೇಣ ಏರಿಕೆ ಕಂಡುಬಂದಿದ್ದು, ಈಗ ದಾಖಲೆಯ ಬೆಲೆಗೆ ತಲುಪಿರುವುದು ರೈತರ ಮೊಗದಲ್ಲಿ ಸಂತೋಷದ ನಗೆ ತಂದಿದೆ.
5.ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಭಾರೀ ಮಳೆ
ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಭಾರೀ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಳೆಯ ಅಲರ್ಟ್ ನೀಡಿ ಎಚ್ಚರಿಕೆ ನೀಡಲಾಗಿದೆ. ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದ್ರೆ, ಇತ್ತ ಬೆಂಗಳೂರಿಗೆ ಇಂದು ಯಲ್ಲೋ ಅಲರ್ಟ್ ನೀಡಲಾಗಿದೆ.
6.ಅರಣ್ಯ ಇಲಾಖೆಯ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನೇಮಕ
ಕರ್ನಾಟಕದ ಅರಣ್ಯ ಇಲಾಖೆಯ ರಾಯಭಾರಿಯಾಗಿ ಖ್ಯಾತ ಕ್ರಿಕೆಟಿಗ ಮತ್ತು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಲಾಗಿದೆ ಎಂದು ಅರಣ್ಯ, ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅನಿಲ್ ಕುಂಬ್ಳೆ ಅವರಿಗೆ ಇರುವ ಗಾಢ ಆಸಕ್ತಿ ಮತ್ತು ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಈ ಪ್ರತಿಷ್ಠಿತ ಹುದ್ದೆಗೆ ಅವರನ್ನು ಆಯ್ಕೆ ಮಾಡಲಾಗಿದೆ.
7.ಚಂಚಲಗೂಡದಿಂದ ಪರಪ್ಪನ ಅಗ್ರಹಾರ ಜೈಲಿಗೆ ರೆಡ್ಡಿ ಶಿಫ್ಟ್
ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಜನಾರ್ದನ ರೆಡ್ಡಿಯವರನ್ನು ಚಂಚಲಗೂಡ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ಹೈದರಾಬಾದ್‌ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ರೆಡ್ಡಿಯವರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸುವ ಆದೇಶ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಜೂನ್ 2, 2025ಕ್ಕೆ ಮುಂದೂಡಲಾಗಿದೆ.
8.ಕಾರ್ಡ್‌ನಿಂದ ಮನೆ ನಿರ್ಮಿಸಿ ಗಿನ್ನೆಸ್ ರೆಕಾರ್ಡ್ ಬರೆದ ಹುಡುಗ
ಇಂದಿನ ಯುವ ಪೀಳಿಗೆ ತಮ್ಮ ಅಪಾರ ಪ್ರತಿಭೆಯಿಂದ ಜಗತ್ತನ್ನೇ ಆಶ್ಚರ್ಯಚಕಿತಗೊಳಿಸುತ್ತಿದ್ದಾರೆ. ಇಂತಹ ಅದ್ಭುತ ಸಾಧನೆಯ ಒಂದು ಉದಾಹರಣೆಯಾಗಿ ಕೋಲ್ಕತ್ತಾದ 15 ವರ್ಷದ ಬಾಲಕ ಅರ್ನವ್ ಡಾಗಾ ಎಂಬಾತ ತನ್ನ ಕೌಶಲದಿಂದ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದಾನೆ. ಕೇವಲ ಕಾರ್ಡ್‌ಗಳನ್ನು ಬಳಸಿ ಯಾವುದೇ ಗಮ್, ಟೇಪ್ ಅಥವಾ ಇತರ ಬಂಧಕಗಳಿಲ್ಲದೆ 40 ಅಡಿ ಎತ್ತರದ ಮನೆಯನ್ನು ನಿರ್ಮಿಸುವ ಮೂಲಕ ಈ ಬಾಲಕ ಗಿನ್ನೆಸ್ ದಾಖಲೆ ಬರೆದಿದ್ದಾನೆ.
9.ಜೂನಿಯರ್ ಎನ್‌ಟಿಆರ್ ಜೊತೆ ರಶ್ಮಿಕಾ ಐಟಂ ಡ್ಯಾನ್ಸ್?
ನಟಿ ರಶ್ಮಿಕಾ ಮಂದಣ್ಣರಿಗೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಭಾರೀ ಬೇಡಿಕೆಯಿದೆ. ‘ಪುಷ್ಪ’ ಚಿತ್ರದ ಶ್ರೀವಲ್ಲಿಯಾಗಿ ದೇಶಾದ್ಯಂತ ಜನಪ್ರಿಯರಾದ ರಶ್ಮಿಕಾ, ಈಗ ಜ್ಯೂನಿಯರ್ ಎನ್‌ಟಿಆರ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಸ್ಪೆಷಲ್ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
10.ಬ್ರಿಜ್ ಭೂಷಣ್ ಸಿಂಗ್‌ಗೆ ಪೋಕ್ಸೋ ಕೇಸ್‌ನಲ್ಲಿ ದೋಷಮುಕ್ತಿ
ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್‌ಗೆ ಪೋಕ್ಸೋ ಕೇಸ್‌ನಲ್ಲಿ ದೋಷಮುಕ್ತಿಯ ರಿಲೀಫ್ ಸಿಕ್ಕಿದೆ. ಅಪ್ರಾಪ್ತ ಕುಸ್ತಿಪಟುವಿನ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸುವಂತೆ ದೆಹಲಿ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಪಟಿಯಾಲ ಹೈಕೋರ್ಟ್‌ನ ಹೆಚ್ಚುವರಿ ಸೆಶನ್ ನ್ಯಾಯಾಧೀಶ ಗೋಮತಿ ಮನೋಚ ಅವರು ಅಂಗೀಕರಿಸಿದ್ದಾರೆ. ಅಪ್ರಾಪ್ತೆ ಮತ್ತು ಆಕೆಯ ತಂದೆಯು ನ್ಯಾಯಾಲಯದಲ್ಲಿ ಬಿ-ರಿಪೋರ್ಟ್‌ಗೆ ಸಮ್ಮತಿ ಸೂಚಿಸಿದ್ದರಿಂದ ಪ್ರಕರಣವನ್ನು ರದ್ದುಗೊಳಿಸಲಾಗಿದೆ.

