ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮ (KSRTC) ಪರಿಷ್ಕೃತ ಬಸ್ ಪ್ರಯಾಣ ದರ ಇದೇ ಭಾನುವಾರದಿಂದ ಜಾರಿಗೆ ಬರಲಿದೆ. 15% ಟಿಕೆಟ್ ದರ ಏರಿಸುವ ಮೂಲಕ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕ್ ನೀಡಿದೆ. ಇದೀಗ ಬಸ್ ಟಿಕೆಟ್ ದರ ಏರಿಸಲು ಅಸಲಿ ಕಾರಣವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ತಿಳಿಸಿದ ಸಚಿವರು, ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಸಾರಿಗೆ ಸಂಸ್ಥೆಗಳ ಮೇಲೆ 5,900 ಕೋಟಿ ರೂ. ಸಾಲ ಬಿಟ್ಟು ಹೋಗಿದ್ದರು. ಇದರಿಂದ ಅನಿವಾರ್ಯವಾಗಿ ಬಸ್ ಟಿಕೆಟ್ ದರವನ್ನು 15% ರಷ್ಟು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ 2020ರಲ್ಲಿ ರೂ. 60 ಇದ್ದ ಡೀಸೆಲ್ ದರವನ್ನು ಈಗ 90 ರೂಪಾಯಿಗೆ ಹೆಚ್ಚಿಸಿದೆ. ಡೀಸೆಲ್ ದರವನ್ನು ಕಡಿಮೆ ಮಾಡಿ ನಂತರ ಬಿಜೆಪಿಯವರು ಟಿಕೆಟ್ ದರ ಏರಿಕೆ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಬಿಜೆಪಿ ಸರ್ಕಾರ ಅಷ್ಟು ಮೊತ್ತದ ಸಾಲ ಮಾಡದಿದ್ದರೆ ಕಾಂಗ್ರೆಸ್ ದರ ಏರಿಕೆಗೆ ಹೋಗುತ್ತಿರಲಿಲ್ಲ. 2020 ಜನವರಿಯಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಟಿಕೆಟ್ ದರವನ್ನು ಶೇ. 12 ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಬಿಜೆಪಿಯವರಿಗೆ ದರ ಏರಿಕೆ ಪ್ರಶ್ನಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು.
ದೈನಂದಿನ ಬಸ್‌ಗಳ ನಿರ್ವಹಣೆ ಮತ್ತು ಸಂಬಳದ ವೆಚ್ಚಕ್ಕೆ ಹೋಲಿಸಿದರೆ ಟಿಕೆಟ್‌ಗಳ ಮಾರಾಟದಿಂದ ಬರುವ ಆದಾಯ ಕಡಿಮೆಯಾಗಿದೆ ಹೀಗಾಗಿ ದರ ಹೆಚ್ಚಳ ಅಗತ್ಯವಾಗಿದೆ. ಶಕ್ತಿ ಯೋಜನೆಗೆ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಹಣ ನೀಡುತ್ತಿದ್ದು, ಅದಕ್ಕೂ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ದರ ಪರಿಷ್ಕರಿಸುವಂತೆ ಸಾರಿಗೆ ನಿಗಮಗಳ ನೌಕರರ ಬೇಡಿಕೆ ಕೂಡಾ ಆಗಿತ್ತು. ದರ ಏರಿಕೆ ಬಗ್ಗೆ ಪುರುಷ ಪ್ರಯಾಣಿಕರ ಕೋಪ ಸಹಜ ಆದರೆ, ಬಿಜೆಪಿಗೆ ಯಾವುದೇ ನೈತಿಕ ಹಕ್ಕುಗಳಿಲ್ಲ ಎಂದು ಟೀಕಿಸಿದರು.
ಬಿಜೆಪಿ ಮಹಿಳೆಯರಿಗೆ ನೀಡುವ ಯೋಜನೆಗಳ ವಿರುದ್ಧವಾಗಿದೆ. ಅವರು ಏನು ಮಾಡಿದರೂ ಮತ್ತು ಸರ್ಕಾರದ ವಿರುದ್ಧ ಎಷ್ಟು ಪ್ರಚಾರ ಮಾಡಿದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಮತ್ತು ಬಿಜೆಪಿಯ ಅಂತರವು ಮತ್ತಷ್ಟು ಕಡಿಮೆಯಾಗಲಿದೆ. ಪ್ರಯಾಣ ದರ ಹೆಚ್ಚಳ ಮಾಡಬೇಕೆಂದು ರಾಜ್ಯದ ನಾಲ್ಕು ನಿಗಮಗಳ ಆರು ತಿಂಗಳ ಹಿಂದೆಯೇ ಬೇಡಿಕೆ ಸಲ್ಲಿಸಿದ್ದವು, ಅದನ್ನು ಈಗ ಪರಿಗಣಿಸಲಾಗಿದೆ ಎಂದು ಸಚಿವರು ತಿಳಿಸಿದರು.

