ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಅವರು ಬಿಜೆಡಿ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಜರ್ಮನಿಯಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮದುವೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಫೋಟೋದಲ್ಲಿ 50 ವರ್ಷದ ಮೊಯಿತ್ರಾ ಮತ್ತು 65 ವರ್ಷದ ಮಿಶ್ರಾ ಕೈ ಹಿಡಿದು ನಗುತ್ತಿರುವುದು ಸೆರೆಯಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ಈ ವಿಚಾರದ ಬಗ್ಗೆ ಮೋಯಿತ್ರಾ ಯಾವುದೇ ವಿಚಾರಗಳನ್ನು ಬಹಿರಂಗಪಡಿಸಿಲ್ಲ.
ಸಂಸತ್ತಿನಲ್ಲಿ ಜೋರು ಭಾಷಣಗಳ ಮೂಲಕ ಹೆಸರುವಾಸಿಯಾಗಿರುವ ಮೊಯಿತ್ರಾ, ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿಯಲ್ಲಿ ಅವರ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹಣ ಪಡೆದ ಆರೋಪ ಕೇಳಿಬಂದಿತ್ತು. ಈ ಆರೋಪದ ಮೇಲೆ ಅವರನ್ನು ಅನರ್ಹಗೊಳಿಸಲಾಗಿತ್ತು.
ಮಹುವಾ ಮೊಯಿತ್ರಾ ಅಕ್ಟೋಬರ್ 12, 1974 ರಂದು ಅಸ್ಸಾಂನಲ್ಲಿ ಜನಿಸಿದರು. ಅವರು ಅರ್ಥಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಬಿಎ ಪದವಿಯನ್ನು ಪಡೆದಿದ್ದಾರೆ. ಅಮೆರಿಕದ ಮ್ಯಾಸಚೂಸೆಟ್ಸ್‌ನ ಮೌಂಟ್ ಹೋಲಿಯೋಕ್ ಕಾಲೇಜಿನಲ್ಲಿ ಮ್ಯಾಗ್ನಾ ಕಮ್ ಲಾಡ್ ಪದವಿ ಪಡೆದಿದ್ದಾರೆ. 2010 ರಲ್ಲಿ, ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದರು. 2019 ರಲ್ಲಿ ಪಶ್ಚಿಮ ಬಂಗಾಳದ ಕರಿಂಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದರು.
ಪಿನಾಕಿ ಮಿಶ್ರಾ ಅಕ್ಟೋಬರ್ 23, 1959 ರಂದು ಒಡಿಶಾದ ಪುರಿಯಲ್ಲಿ ಜನಿಸಿದರು. ಇವರು, ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಬಿಎ (ಆನರ್ಸ್) ಪದವಿ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.
ಮಿಶ್ರಾ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1996ರಲ್ಲಿ ಪುರಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಗೆಲುವು ಪಡೆದರು. ನಂತರ ಅವರು ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ (ಬಿಜೆಡಿ) ಸೇರಿದರು. 2009, 2014 ಮತ್ತು 2019ರಲ್ಲಿ ಮರು ಆಯ್ಕೆಯಾಗಿದ್ದರು.

