ವಾಷಿಂಗ್ಟನ್: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಯುಎಸ್‌ಗೆ ಆಗಮಿಸಿದ ವಿಪಕ್ಷ ನಾಯಕನಿಗೆ ಹೂಗುಚ್ಛ ನೀಡಿ, ಆರತಿ ಬೆಳಗಿ ಸ್ವಾಗತ ಕೋರಲಾಯಿತು.ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ಭಾರತೀಯ ಮೂಲದ ನಿವಾಸಿಗಳು ಅದ್ದೂರಿ ಸ್ವಾಗತ ಕೋರಿದರು. ಭಾರತೀಯ ಅಮೆರಿಕನ್ ಸಮುದಾಯ ಹಾಗೂ (ಐಒಸಿ) ಸದಸ್ಯರು ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡರು.ಕಾಂಗ್ರೆಸ್ ಸಂಸದರನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಭಾರತೀಯ ಡಯಾಸ್ಪೊರಾ ಸದಸ್ಯರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ತಮ್ಮ ಈ ಭೇಟಿಯ ವೇಳೆ ಭಾರತ – ಅಮೆರಿಕ ಎರಡೂ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಸಂಬಂಧ ಅರ್ಥ ಪೂರ್ಣ ಚರ್ಚೆ ಮತ್ತು ಒಳನೋಟವುಳ್ಳ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ’ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ. ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರು ಅಮೆರಿಕಗೆ ಭೇಟಿ ನೀಡುತ್ತಿದ್ದಾರೆ.
ಸೆಪ್ಟೆಂಬರ್ 9 ಹಾಗೂ 10 ರಂದು ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ರಾಹುಲ್ ಗಾಂಧಿ ಇರಲಿದ್ದಾರೆ. ಕಾಂಗ್ರೆಸ್ ಪಕ್ಷದ ಆಳ್ವಿಕೆ ಇರುವ ರಾಜ್ಯಗಳಲ್ಲಿ ಹೂಡಿಕೆ ಮಾಡುವ ಸಂಬಂಧ ಉದ್ಯಮ ಸಂಬಂಧಿ ಮಾತುಕತೆಗಳಿಗೆ ಹಲವರು ಉತ್ಸುಕರಾಗಿದ್ದಾರೆ. ಅದರಲ್ಲೂ ಟೆಕ್ ಸಿಟಿಗಳೆಂದೇ ಜನಪ್ರಿಯವಾಗಿರುವ ಬೆಂಗಳೂರು, ಹೈದರಾಬಾದ್, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಉದ್ಯಮ, ವಹಿವಾಟು ಹಾಗೂ ತಂತ್ರಜ್ಞಾನ ಆಧರಿತ ಸಮುದಾಯಗಳ ಕುರಿತಾಗಿ ರಾಹುಲ್ ಗಾಂಧಿ ಭೇಟಿ ವೇಳೆ ಮಾತುಕತೆ ನಡೆಯುವ ಸಾಧ್ಯತೆಗಳಿವೆ. ಈ ಹಿಂದೆ ರಾಹುಲ್ ಗಾಂಧಿ ಅವರು ವಿದೇಶಗಳಲ್ಲಿ ನೀಡಿದ್ದ ಕೆಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

