ವಾಷಿಂಗ್ಟನ್: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂಡಿಯಾ- ಅಮೆರಿಕನ್ ವಕೀಲ ಹರ್ಮೀತ್ ಕೆ. ಧಿಲ್ಲೋನ್ ಅವರನ್ನು ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ನಾಮನಿರ್ದೇಶನ ಮಾಡಿದ್ದಾರೆ.
ಈ ವಿಷಯವನ್ನು ಸ್ವತಃ ಟ್ರಂಪ್ ಅವರೇ ಘೋಷಿಸಿದ್ದು, ಹರ್ಮೀತ್ ಕೆ ಧಿಲ್ಲೋನ್ ಅವರನ್ನು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ನೇಮಿಸಲು ನನಗೆ ಸಂತಸವಾಗುತ್ತಿದೆ. ಹರ್ಮೀತ್ ತನ್ನ ವೃತ್ತಿಜೀವನದುದ್ದಕ್ಕೂ ನಾಗರಿಕ ಸ್ವಾತಂತ್ರ್ಯವನ್ನು ರಕ್ಷಿಸಲು ನಿಂತಿದ್ದಾಳೆ ಎಂದು ಹೇಳಿದರು.
ಹರ್ಮೀತ್ ಅವರು ಸಿಖ್ ಸಮುದಾಯದ ಗೌರವಾನ್ವಿತ ಸದಸ್ಯೆ ಎಂದು ಟ್ರಂಪ್ ಹೇಳಿದ್ದಾರೆ. ಇನ್ನು ಚಂಡೀಗಢದಲ್ಲಿ ಜನಿಸಿರುವ ಹರ್ಮೀತ್ ಧಿಲ್ಲೋನ್, ಮಗುವಾಗಿದ್ದಾಗಲೇ ಪೋಷಕರು ಅಮೆರಿಕಕ್ಕೆ ತೆರಳಿದರು. ಸದ್ಯ ಅಮೆರಿಕದ ಉನ್ನತ ವಕೀಲರಲ್ಲಿ ಒಬ್ಬರಾಗಿರುವ ಹರ್ಮೀತ್, ಡಾರ್ಟ್ಮೌತ್ ಕಾಲೇಜು ಮತ್ತು ವರ್ಜೀನಿಯಾ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪದವೀಧರರಾಗಿದ್ದಾರೆ.