ನವದೆಹಲಿ: ಇರಾನ್ ಮತ್ತು ಇಸ್ರೇಲ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಕತಾರ್‌ನಲ್ಲಿರುವ ಯುಎಸ್ ವಾಯುನೆಲೆಯ ಮೇಲೆ ಇರಾನಿನ ಕ್ಷಿಪಣಿ ದಾಳಿಯ ಸ್ವಲ್ಪ ಸಮಯದ ನಂತರ, ನಿನ್ನೆ ರಾತ್ರಿ ಈ ಘೋಷಣೆ ಮಾಡಲಾಗಿದೆ.
ಟ್ರೂತ್ ಸೋಷಿಯಲ್‌ನಲ್ಲಿ ನೀಡಿದ ಹೇಳಿಕೆಯಲ್ಲಿ, ಎರಡೂ ದೇಶಗಳು ತಮ್ಮ ನಡೆಯುತ್ತಿರುವ ಅಂತಿಮ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ ನಂತರ ಕದನ ವಿರಾಮ ಪ್ರಾರಂಭವಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಹೇಳಿಕೆಯ ಪ್ರಕಾರ, ಕದನ ವಿರಾಮವನ್ನು ಹಂತಗಳಲ್ಲಿ ಜಾರಿಗೆ ತರಲಾಗುವುದು. ಇರಾನ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ, ನಂತರ 12 ನೇ ಗಂಟೆಯಲ್ಲಿ ಇಸ್ರೇಲ್ ಮತ್ತು 24 ನೇ ಗಂಟೆಯಲ್ಲಿ, 12 ದಿನಗಳ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
ಈ ನಡುವೆ, ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇಸ್ರೇಲ್‌ನೊಂದಿಗೆ ಕದನ ವಿರಾಮದ ಕುರಿತು ಯಾವುದೇ ಒಪ್ಪಂದವನ್ನು ನಿರಾಕರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ನಮ್ಮ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಅರಘ್ಚಿ ಹೇಳಿದ್ದಾರೆ. ಇಸ್ರೇಲ್ ಆಡಳಿತವು ಇರಾನಿನ ಜನರ ವಿರುದ್ಧ ತನ್ನ ಕಾನೂನುಬಾಹಿರ ಆಕ್ರಮಣವನ್ನು ನಿಲ್ಲಿಸಿದರೆ, ಟೆಹ್ರಾನ್ ತನ್ನ ಪ್ರತಿಕ್ರಿಯೆಯನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಅವರು ಹೇಳಿದರು.
ಈ ನಡುವೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನೊಂದಿಗೆ ಸಂಯೋಜಿತವಾಗಿರುವ ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿ, ಅಧ್ಯಕ್ಷ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಯೋಜನೆ ಸಂಪೂರ್ಣವಾಗಿ ಸುಳ್ಳು ಮತ್ತು ಸಾರ್ವಜನಿಕ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವನ್ನು ಹೊಂದಿದೆ ಎಂದು ವರದಿ ಮಾಡಿದೆ. ಟ್ರಂಪ್ ಅವರ ಹೇಳಿಕೆಗಳಿಗೆ ವಿರುದ್ಧವಾಗಿ, ಕದನ ವಿರಾಮಕ್ಕಾಗಿ ಇರಾನ್ ಯಾವುದೇ ಅಧಿಕೃತ ಅಥವಾ ಅನಧಿಕೃತ ಪ್ರಸ್ತಾಪವನ್ನು ಸ್ವೀಕರಿಸಿಲ್ಲ ಎಂದು ಸಂಸ್ಥೆ ಹೇಳಿದೆ.
‘ಇಸ್ರೇಲ್ ಜೊತೆಗೆ ಯಾವುದೇ ಕದನ ವಿರಾಮ ಏರ್ಪಟ್ಟಿಲ್ಲ’- ಇರಾನ್
ಇಸ್ರೇಲ್ ಜೊತೆಗೆ ಯಾವುದೇ ಕದನ ವಿರಾಮ ಏರ್ಪಟ್ಟಿಲ್ಲ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ತಿಳಿಸಿದ್ದಾರೆ.ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಶ್ವೇತಭವನ ಘೋಷಿಸಿದ ಬೆನ್ನಲ್ಲೇ, ಅಬ್ಬಾಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಪೋಸ್ಟ್ ಮಾಡಿದ್ದಾರೆ.
‘ಇಸ್ರೇಲ್ ದಾಳಿ ನಿಲ್ಲಿಸಿದ ಕೂಡಲೇ ನಾವು ನಿಲ್ಲಿಸುತ್ತೇವೆ. ಯುದ್ಧ ಪ್ರಾರಂಭಿಸಿದ್ದು ಇಸ್ರೇಲ್, ನಾವಲ್ಲ ಎಂದು ನಾವು ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಈವರೆಗೂ ಕದನ ವಿರಾಮ ಅಥವಾ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಒಪ್ಪಂದ ನಡೆದಿಲ್ಲ’ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
‘ಇರಾನ್ ಜನತೆ ಮೇಲೆ ಇಸ್ರೇಲ್ ಆಡಳಿತವು ನಡೆಸುತ್ತಿರುವ ಕಾನೂನು ಬಾಹಿರ ಆಕ್ರಮಣವನ್ನು ಟೆಹರಾನ್ ಸಮಯ ಬೆಳಿಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ಅವರಿಗೆ ಪ್ರತ್ಯುತ್ತರ ನೀಡುವ ಯಾವುದೇ ಉದ್ದೇಶ ನಮಗಿಲ್ಲ. ನಮ್ಮ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

