ಬೀಜಿಂಗ್ : ಚೀನಾದ ಆಮದುಗಳ ಮೇಲೆ ಶೇ. 104ರಷ್ಟು ಸುಂಕವನ್ನು ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಶಾಕ್ ನೀಡಿದ್ದರು. ಅದಕ್ಕೆ ಇದೀಗ ಚೀನಾ ತಿರುಗೇಟು ನೀಡಿದೆ. ಮುಯ್ಯಿಗೆ ಮುಯ್ಯಿ ಎಂಬಂತೆ ಚೀನಾ ಅಮೆರಿಕಕ್ಕೆ ಬಿಸಿ ಮುಟ್ಟಿಸಿದೆ.
ಚೀನಾ ಅಮೆರಿಕದ ಸರಕುಗಳ ಆಮದುಗಳ ಮೇಲೆ ಶೇ. 84ರಷ್ಟು ಸುಂಕವನ್ನು ಘೋಷಿಸಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧದ ಮಧ್ಯೆ, ಬೀಜಿಂಗ್ ಡೊನಾಲ್ಡ್ ಟ್ರಂಪ್ ) ಅವರ 104 ಪ್ರತಿಶತ ಸುಂಕಗಳಿಗೆ ಪ್ರತೀಕಾರವಾಗಿ ಅಮೆರಿಕದ ಎಲ್ಲಾ ಸರಕುಗಳ ಮೇಲೆ ಶೇ. 84 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದೆ. ಈ ಮೂಲಕ ಇಂದು ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧವು ಹೊಸ ಉತ್ತುಂಗಕ್ಕೇರಿದೆ.
ಅಮೆರಿಕದ ಸರಕುಗಳ ಮೇಲಿನ ಬೀಜಿಂಗ್‌ನ ಪ್ರತೀಕಾರದ ಸುಂಕ ದರವು ಹಿಂದೆ ಘೋಷಿಸಲಾದ 34 ಪ್ರತಿಶತದಿಂದ ಹೆಚ್ಚಾಗಿದೆ. ಅಮೆರಿಕದ ಸರಕುಗಳ ಮೇಲೆ ಹೊಸದಾಗಿ ವಿಧಿಸಲಾದ ಸುಂಕಗಳು ಏಪ್ರಿಲ್ 10ರಿಂದ ಜಾರಿಗೆ ಬರಲಿವೆ ಎಂದು ಚೀನಾದ ಹಣಕಾಸು ಸಚಿವಾಲಯ ಘೋಷಿಸಿದೆ. ಇದು ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ.
ಟ್ರಂಪ್ ಚೀನಾದ ಸರಕುಗಳ ಮೇಲೆ ಸುಂಕಗಳನ್ನು ಘೋಷಿಸಿದ ನಂತರ, ಚೀನಾ ಕಳೆದ ವಾರ ಏಪ್ರಿಲ್ 10ರಿಂದ ಎಲ್ಲಾ ಯುಎಸ್ ಸರಕುಗಳ ಮೇಲೆ ಶೇ. 34ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಘೋಷಿಸಿತ್ತು. ಬೀಜಿಂಗ್ ಮಧ್ಯಮ ಮತ್ತು ಭಾರವಾದ ಅಪರೂಪದ ಭೂಮಿಯ ರಫ್ತುಗಳನ್ನು ನಿಯಂತ್ರಿಸುವುದಾಗಿಯೂ ಹೇಳಿತ್ತು.
ತನ್ನೊಂದಿಗೆ ನಿಲ್ಲುವಂತೆ ಭಾರತಕ್ಕೆ ಮನವಿ ಮಾಡಿದ ಚೀನಾ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರೀ ಸುಂಕದ ಹೊಡೆತಕ್ಕೆ ಸಿಲುಕಿದ ನಂತರ ಚೀನಾ ಈಗ ಭಾರತವನ್ನು ನೆನಪಿಸಿಕೊಂಡಿದೆ. ಅಮೆರಿಕದ ಸುಂಕಗಳು ವಿಶ್ವ ಮಾರುಕಟ್ಟೆಗಳಲ್ಲಿ ಗೊಂದಲವನ್ನು ಸೃಷ್ಟಿಸಿವೆ. ಚೀನಾ ಸುಂಕಗಳನ್ನು ವಿರೋಧಿಸುತ್ತಲೇ ಇದ್ದರೂ ಅದು ಆಂತರಿಕವಾಗಿ ಆತಂಕಕ್ಕೊಳಗಾಗಿದೆ. ಇದೇ ಕಾರಣಕ್ಕಾಗಿ ಬೀಜಿಂಗ್ ಈಗ ಭಾರತವನ್ನು ಸ್ನೇಹಕ್ಕಾಗಿ ಮನವಿ ಮಾಡಿದೆ ಮತ್ತು ಕಠಿಣ ಪರಿಸ್ಥಿತಿಯನ್ನು ನಿವಾರಿಸಲು ಭಾರತವು ತನ್ನೊಂದಿಗೆ ನಿಲ್ಲುವಂತೆ ವಿನಂತಿಸಿದೆ.