ಅಂಕಾರಾ, ಫೆಬ್ರವರಿ 25: ಎಫ್–16 ಫೈಟಿಂಗ್ ಫಾಲ್ಕನ್ ಯುದ್ಧ ವಿಮಾನ(Turkish Air Force)ವೊಂದು ಟರ್ಕಿಯ ಪಶ್ಚಿಮ ಭಾಗದಲ್ಲಿರುವ ಬಾಲಿಕೇಸಿರ್ ನಗರದಲ್ಲಿ ಸೋಮವಾರ ತಡರಾತ್ರಿ ಪತನಗೊಂಡಿದೆ. ಪತನಗೊಂಡ ತಕ್ಷಣವೇ ಭಾರೀ ಸ್ಫೋಟ ಸಂಭವಿಸಿದ್ದು, ವಿಮಾನ ಬೆಂಕಿಯುಂಡೆಯಂತೆ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಅವಶೇಷಗಳು ಚದುರಿಹೋಗಿರುವುದು ಹಾಗೂ ಬೆಂಕಿ ಹೊತ್ತಿ ಉರಿಯುತ್ತಿರುವುದು ಗೋಚರಿಸುತ್ತದೆ.
ವಿಮಾನವು ಬುರ್ಸಾ–ಇಜ್ಮಿರ್ ಹೆದ್ದಾರಿ ಸಮೀಪ ಪತನಗೊಂಡಿದ್ದು, ಸ್ಥಳೀಯ ಸಮಯದ ಪ್ರಕಾರ ಬೆಳಗಿನ ಜಾವ ಸುಮಾರು 1 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅಪಘಾತಕ್ಕೂ ಮುನ್ನ ರೇಡಿಯೋ ಸಂಪರ್ಕ ಹಾಗೂ ರಾಡಾರ್ ಟ್ರ್ಯಾಕಿಂಗ್ ಇದ್ದಕ್ಕಿದ್ದಂತೆ ಕಳೆದುಹೋಗಿದ್ದರಿಂದ ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಹಲವು ಆಂಬ್ಯುಲೆನ್ಸ್‌ಗಳು ಮತ್ತು ಪೊಲೀಸ್ ವಾಹನಗಳು ಸ್ಥಳಕ್ಕೆ ಆಗಮಿಸಿ ಭದ್ರತಾ ವಲಯ ನಿರ್ಮಿಸಿ ತನಿಖೆ ಆರಂಭಿಸಿವೆ.
ಬಾಲಿಕೇಸಿರ್ ಗವರ್ನರ್ ಇಸ್ಮಾಯಿಲ್ ಉಸ್ತಾವೊಗುಲು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ನೀಡಿದ ಹೇಳಿಕೆಯಲ್ಲಿ, “ಬಾಲಿಕೇಸಿರ್ 9ನೇ ಮುಖ್ಯ ಜೆಟ್ ಬೇಸ್ ಕಮಾಂಡ್‌ನ ಸ್ಕ್ವಾಡ್ರನ್‌ಗೆ ಸೇರಿದ ನಮ್ಮ ಎಫ್–16 ವಿಮಾನಗಳಲ್ಲಿ ಒಂದು ಬೆಳಿಗ್ಗೆ 00:50ರ ಸುಮಾರಿಗೆ ಮಿಷನ್ ಹಾರಾಟದ ವೇಳೆ ಅಪಘಾತಕ್ಕೀಡಾಯಿತು. ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಹುತಾತ್ಮರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಹಾಗೂ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ” ಎಂದು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಎಫ್–16 ಅಪಘಾತಗಳು
ಎಫ್–16 ಯುದ್ಧ ವಿಮಾನಗಳಿಗೆ ಸಂಬಂಧಿಸಿದ ಅಪಘಾತಗಳು ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ನಡೆದಿವೆ. 2015ರಿಂದ 2024ರವರೆಗೆ ತರಬೇತಿ ಹಾರಾಟದ ವೇಳೆ ವಿವಿಧ ತಾಂತ್ರಿಕ ಸಮಸ್ಯೆಗಳು ವರದಿಯಾಗಿವೆ.
2019ರಲ್ಲಿ ಇಸ್ಲಾಮಾಬಾದ್ ಸಮೀಪ ಪೆರೇಡ್ ಅಭ್ಯಾಸದ ವೇಳೆ ಎಫ್–16 ಪತನಗೊಂಡು ಪೈಲಟ್ ಸಾವನ್ನಪ್ಪಿದ್ದರು. 2015ರಲ್ಲಿ ಸ್ಪೇನ್‌ನ ಅಲ್ಬಾಸೆಟ್ ವಾಯುನೆಲೆಯಲ್ಲಿ ಗ್ರೀಕ್ ಎಫ್–16 ಅಪಘಾತಕ್ಕೀಡಾಗಿ ಹಲವರು ಮೃತಪಟ್ಟಿದ್ದರು. 2023ರಲ್ಲಿ ಅಯೋನಿಯನ್ ಸಮುದ್ರದಲ್ಲಿ ಎಫ್–16 ಪತನಗೊಂಡು ಪೈಲಟ್ ಪತ್ತೆಯಾಗಲಿಲ್ಲ. 2022ರಿಂದ 2024ರ ಅವಧಿಯಲ್ಲಿ ದಕ್ಷಿಣ ಕೊರಿಯಾದಲ್ಲಿ ತರಬೇತಿ ಹಾರಾಟದ ವೇಳೆ ಪ್ರತ್ಯೇಕ ಎಫ್–16 ಅಪಘಾತಗಳು ನಡೆದಿರುವುದು ವರದಿಯಾಗಿದೆ. ಅಪಘಾತದ ನಿಖರ ಕಾರಣ ತಿಳಿಯಲು ಟರ್ಕಿ ರಕ್ಷಣಾ ಅಧಿಕಾರಿಗಳು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

