ಬೆಂಗಳೂರು, ಫೆ.18: ನಗರದಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಭೀಕರ ಹತ್ಯೆ ಪ್ರಕರಣಗಳು ಆತಂಕ ಮೂಡಿಸಿವೆ. ಎರಡೂ ಪ್ರಕರಣಗಳಲ್ಲಿ ಗಂಡಂದಿರೇ ತಮ್ಮ ಪತ್ನಿಯರನ್ನು ಕೊಲೆ ಮಾಡಿರುವುದು ಗಮನಾರ್ಹವಾಗಿದೆ.
ಗೋವಿಂದರಾಜನಗರದಲ್ಲಿ ಅನುಮಾನದಿಂದ ಪತ್ನಿ ಹತ್ಯೆ
ಪತ್ನಿಯ ಮೇಲೆ ಅನುಮಾನಗೊಂಡ ಪತಿ ಮಧ್ಯರಾತ್ರಿ ಮಚ್ಚಿನಿಂದ ಕತ್ತು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಲಪಾಳ್ಯದ ಸಂಜೀವಿನಿ ನಗರ ನಿವಾಸಿ ದೇವಮ್ಮ (58) ಹತ್ಯೆಯಾದವರು. ಆರೋಪಿ ಕುಮಾರ್ ಮತ್ತು ದೇವಮ್ಮ ದಂಪತಿಗೆ ಮೂವರು ಮಕ್ಕಳು ಇದ್ದು, ಇಬ್ಬರು ಹೆಣ್ಣುಮಕ್ಕಳು ಹಾಗೂ ಮಗನಿಗೆ ಮದುವೆಯಾಗಿದೆ. ಸಂಜೀವಿನಿ ನಗರದಲ್ಲೇ ದಂಪತಿ ವಾಸವಾಗಿದ್ದು, ಮಗ ಮನೆ ಸಮೀಪವೇ ಬೇರೆ ವಾಸವಾಗಿದ್ದಾನೆ.
ಕುಮಾರ್ ಗಾರೆ ಕೆಲಸ ಮಾಡುತ್ತಿದ್ದರೆ, ದೇವಮ್ಮ ರೈಲ್ವೆ ನಿಲ್ದಾಣದ ಸ್ವಚ್ಛತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಮೇಲೆ ಅನುಮಾನ ಹೊಂದಿದ್ದ ಕುಮಾರ್ ಆಗಾಗ್ಗೆ ಜಗಳ ಮಾಡುತ್ತಿದ್ದನೆಂದು ತಿಳಿದು ಬಂದಿದೆ.
ರಾತ್ರಿ ಊಟದ ನಂತರ ದೇವಮ್ಮ ಮಲಗಿದ್ದ ವೇಳೆ, ಮಧ್ಯರಾತ್ರಿ 12.30ರ ಸುಮಾರಿಗೆ ಮಚ್ಚಿನಿಂದ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ಮಗನಿಗೆ ಫೋನ್ ಮಾಡಿ “ನಿನ್ನ ತಾಯಿಯನ್ನು ಕೊಲೆ ಮಾಡಿದ್ದೇನೆ” ಎಂದು ತಿಳಿಸಿದ್ದಾನೆ.
ಗಾಬರಿಗೊಂಡ ಮಗ ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದು ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ಕುಮಾರ್‌ನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆವಲಹಳ್ಳಿಯಲ್ಲಿ ಟವಲ್‌ನಿಂದ ಕುತ್ತಿಗೆ ಬಿಗಿದು ಪತ್ನಿ ಹತ್ಯೆ
ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 72 ವರ್ಷದ ವೃದ್ಧನೊಬ್ಬ ತನ್ನ 65 ವರ್ಷದ ಪತ್ನಿಯನ್ನು ಟವಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬೊಮನಹಳ್ಳಿಯ ಬಿದರಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಸಂಧ್ಯಾಶ್ರೀ (65) ಹತ್ಯೆಯಾದವರು. ಮೂಲತಃ ಆಂಧ್ರಪ್ರದೇಶದ ವಿಜಯವಾಡದವರಾದ ನಾಗೇಶ್ವರ್ ರಾವ್ (72) ಇಸ್ರೋ ನಿವೃತ್ತ ಉದ್ಯೋಗಿ. ದಂಪತಿ ಫ್ಲಾಟ್‌ನಲ್ಲಿ ಒಟ್ಟಿಗೆ ವಾಸವಾಗಿದ್ದರು.
ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ದಂಪತಿ ನಡುವೆ ಯಾವುದೋ ವಿಚಾರವಾಗಿ ಜಗಳ ಉಂಟಾಗಿದ್ದು, ಕೋಪದಲ್ಲಿ ತಾಳ್ಮೆ ಕಳೆದುಕೊಂಡ ನಾಗೇಶ್ವರ್ ರಾವ್ ಟವಲ್‌ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ನಂತರ ಆತ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರೂ, ಮನಸ್ಸು ಬದಲಿಸಿಕೊಂಡು ಪಕ್ಕದ ಮನೆಯವರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾನೆ. ನೆರೆಮನೆಯವರು ಬಂದು ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ನಾಗೇಶ್ವರ್ ರಾವ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಗರದಲ್ಲಿ ನಡೆದ ಈ ಎರಡು ಹತ್ಯೆ ಪ್ರಕರಣಗಳು ಕುಟುಂಬ ಕಲಹಗಳು ಎಂತಹ ದುರ್ಘಟನೆಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿವೆ.

