ಬೆಂಗಳೂರು: ನಗರದ ಹೊಸಕೆರೆಹಳ್ಳಿಯ ನೈಸ್ ರಸ್ತೆಯಲ್ಲಿ ನಡೆದ ಭೀಕರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಡಿಸೆಂಬರ್ 12ರಂದು ಸಂಜೆ 5:54ರ ಸುಮಾರಿಗೆ ನಡೆದಿದೆ.
ನೈಸ್ ರಸ್ತೆ ಬದಿಯಲ್ಲಿ ಹುಲ್ಲು ತೆರವು ಮಾಡುವ ಕೆಲಸದಲ್ಲಿ ನಿರತರಾಗಿದ್ದ ಯಾದಗಿರಿ ಮೂಲದ ರಂಗಮ್ಮ (45) ಹಾಗೂ ಚೌಡಮ್ಮ (55) ಅವರಿಗೆ ಅತಿವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಂತರ ವಾಹನ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದು, ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ದಿನಗೂಲಿ ಕಾರ್ಮಿಕರಾಗಿದ್ದು, ನಿನ್ನೆ ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೃತದೇಹಗಳನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪರಾರಿಯಾದ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಗರದಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ರಸ್ತೆ ಸುರಕ್ಷತೆ ಹಾಗೂ ವಾಹನ ಚಾಲಕರ ನಿರ್ಲಕ್ಷ್ಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

