ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಕಟ್ಟಡದ 13ನೇ ಮಹಡಿಯಿಂದ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.ಶುಕ್ರವಾರ ಮಧ್ಯಾಹ್ನ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ಸೋನ್‌ಪುರ್ ಮೂಲದ ಅಮೀರ್ ಹುಸೇನ್ (33) ಹಾಗೂ ಮುಮ್ತಾಜ್ ಅಲಿ (28) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.
ಖಾಸಗಿ ಕಂಪನಿಯೊಂದರ ಅಪಾರ್ಟ್‌ಮೆಂಟ್ ಕಟ್ಟಡ ನಿರ್ಮಾಣ ಕೆಲಸವನ್ನು ಇಂಪೀರಿಯಲ್ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್‌ಗೆ ಗುತ್ತಿಗೆಗೆ ವಹಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಕಟ್ಟಡದ ಹದಿಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬಾಲ್ಕನಿ ಕುಸಿದ ಪರಿಣಾಮ ಇಬ್ಬರೂ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಸೂಕ್ತ ಭದ್ರತೆ ವಹಿಸದೆ ನಿರ್ಲಕ್ಷ್ಯತನದಿಂದ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಆರೋಪದಡಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿ ಹಾಗೂ ಸೈಟ್ ಇಂಜಿನಿಯರ್ ವಿರುದ್ಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

