ಬೆಂಗಳೂರು: ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮೆರೆಯುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯಭಾಗವಾದ ಕೆಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.
ಬುಧವಾರ ಬೆಳಗ್ಗೆಯಿಂದಲೇ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನಸಾಗರ ಹರಿದುಬಂದಿದ್ದು, ಮಾರುಕಟ್ಟೆ ಸಂಪೂರ್ಣ ಹಬ್ಬದ ಕಳೆ ತಳೆದಿದೆ.
ಹಬ್ಬದ ಹಿನ್ನೆಲೆ ಬೇಡಿಕೆ ಹೆಚ್ಚಾಗಿರುವುದರಿಂದ ಹೂವು ಮತ್ತು ಹಣ್ಣುಗಳ ದರದಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಮಲ್ಲಿಗೆ ಹೂವು ಕೆಜಿಗೆ ₹1,000ರವರೆಗೆ ಏರಿಕೆಯಾಗಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.
ಹೂವುಗಳ ದರ (ಕೆಜಿಗೆ ರೂ.):
ಮಲ್ಲಿಗೆ – ₹1,000
ಮಲ್ಲಿಗೆ ಹಾರ – ₹100
ಸೇವಂತಿಗೆ – ₹200–250
ಗುಲಾಬಿ – ₹250
ಚೆಂಡು ಹೂ – ₹40–50
ಬೇವಿನ ಸೊಪ್ಪು (ಕಟ್ಟು) – ₹20
ಮಾವಿನ ಸೊಪ್ಪು (ಕಟ್ಟು) – ₹25
ಹಣ್ಣುಗಳ ದರ (ಕೆಜಿಗೆ ರೂ.):
ಖರಬೂಜ – ₹100
ಬೇಲದ ಹಣ್ಣು – ₹50
ದ್ರಾಕ್ಷಿ – ₹120
ದಾಳಿಂಬೆ – ₹220
ದರ ಏರಿಕೆಯ ನಡುವೆಯೂ ಯುಗಾದಿ ಹಬ್ಬದ ಸಿದ್ಧತೆಯಲ್ಲಿ ಜನರು ಯಾವುದೇ ಹಿಂಜರಿಕೆ ತೋರದೆ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿದೆ.
ಇದೇ ವೇಳೆ ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿಯೂ ಯುಗಾದಿ ಖರೀದಿ ಸಡಗರ ತಾರಕ್ಕೇರಿದ್ದು, ನಗರದೆಲ್ಲೆಡೆ ಹಬ್ಬದ ಸಂಭ್ರಮ ಮೆರೆಯುತ್ತಿದೆ.

