ನವ ದೆಹಲಿ : ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರದ ಬಡ ಕೆಳವರ್ಗ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕಾಳಜಿ ಹಾಗೂ ದೂರದೃಷ್ಟಿಯಿಂದ , ಜಾರಿಗೊಳಿಸಿದ್ದಾರೆ.ಆದರೆ ಕರ್ನಾಟಕ ಸರ್ಕಾರವು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ತೀರ್ಮಾನವನ್ನು ತೆಗೆದುಕೊಂಡಿದ್ದು ಹಾಗೂ ಈಗಾಗಲೇ ಚಾಲನೆಯಲ್ಲಿರುವ ಕೇಂದ್ರದ ಪರವಾನಿಗೆಯನ್ನು ನವೀಕರಿಸದೆ ಇರುವುದು ಅತ್ಯಂತ ಖೇದಕರ ಸಂಗತಿ ಆಗಿದೆ.
ಜನ ಔಷಧಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಔಷಧಿ ಹಾಗೂ ಸರ್ಜಿಕಲ್ ಐಟಂಗಳು ರೋಗಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಪ್ರಾಪ್ತವಾಗಿ ಅವರ ಚಿಕಿತ್ಸಾ ವೆಚ್ಚವನ್ನು ನಿಭಾಯಿಸಲು ಅನುಕೂಲ ಮಾಡಿಕೊಟ್ಟಿತ್ತು.
ದೀರ್ಘಕಾಲದ ರಾಜಕೀಯ ಅನುಭವ ಹೊಂದಿದ್ದರೂ ಮುಖ್ಯಮಂತ್ರಿಗಳಾಗಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ರಾಜ್ಯದ ಬಡವರು ಹಾಗೂ ಕೆಳವರ್ಗದವರ ಹಿತವನ್ನು ಕಾಯದೇ, ಯಾವ ಕಾರಣದಿಂದ ಕರ್ನಾಟಕ ರಾಜ್ಯದ ಬಡವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ.
ಈ ಕೂಡಲೇ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ಆದೇಶವನ್ನು ಹಿಂಪಡೆದು ಈಗಾಗಲೇ ಚಾಲ್ತಿಯಲ್ಲಿರುವ ಕೇಂದ್ರಗಳ ಪರವಾನಿಗೆಯನ್ನು ಮುಂದುವರಿಸಲು ಆದೇಶವನ್ನು ಮಾಡಬೇಕು ಎಂದು ಕಳಕಳಿಯಿಂದ ವಿನಂತಿಸಿ ಪತ್ರ ಬರೆದಿದ್ದಾರೆ.

