ವಾಷಿಂಗ್ಟನ್, ಮಾರ್ಚ್ 23: ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕಳೆದ ಎರಡು ದಿನಗಳಿಂದ ಇರಾನ್ ಜೊತೆ ನಡೆದ ಮಾತುಕತೆಗಳು “ಉತ್ಪಾದಕ” (productive) ಮತ್ತು “ಸಕಾರಾತ್ಮಕ”ವಾಗಿವೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಇರಾನ್ ರಾಜಧಾನಿ ತೆಹ್ರಾನ್‌ನ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆಸುವ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್ ಹೇಳುವಂತೆ, ಉಭಯ ದೇಶಗಳ ನಡುವೆ ನಡೆದ ಚರ್ಚೆಗಳು ಗಂಭೀರವಾಗಿದ್ದು, ಸಂಘರ್ಷವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಸಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ಮಾತುಕತೆಗಳು ಮುಂದುವರಿಯಲಿವೆ ಎಂಬ ಸೂಚನೆ ನೀಡಿದ್ದಾರೆ.
ಅಮೆರಿಕಾ ಇತ್ತೀಚೆಗೆ ಇರಾನ್ ಮೇಲೆ ಕಠಿಣ ಎಚ್ಚರಿಕೆ ನೀಡಿದ್ದು, ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಹೇಳಿತ್ತು.ಆದರೆ, ಈಗಿನ ಮಾತುಕತೆಗಳ ಹಿನ್ನಲೆಯಲ್ಲಿ ತೆಹ್ರಾನ್‌ನ ಪವರ್ ಪ್ಲಾಂಟ್‌ಗಳ ಮೇಲೆ ದಾಳಿ 5 ದಿನಗಳ ಕಾಲ ಮುಂದೂಡಲಾಗಿದೆ.
ಇದಾದರೂ, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ. ಅಮೆರಿಕಾ ದಾಳಿಗೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯಗಳ ಮೇಲೆ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿದೆ. ಹಾರ್ಮುಜ್ ಜಲಸಂಧಿ ಸಮಸ್ಯೆಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲೂ ಭಾರೀ ಆತಂಕ ನಿರ್ಮಾಣವಾಗಿದೆ.
ಅಮೆರಿಕಾ–ಇರಾನ್ ನಡುವೆ ಮಾತುಕತೆಗಳು ಆರಂಭವಾದುದು ಶಾಂತಿಯ ಸೂಚನೆಯಾದರೂ, ಯುದ್ಧ ಭೀತಿ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಮುಂದಿನ ಕೆಲ ದಿನಗಳು ಪರಿಸ್ಥಿತಿಗೆ ನಿರ್ಣಾಯಕವಾಗಲಿದೆ.

